ನಕ್ಸಲರು–ಪ್ರಾತಿನಿಧಿಕ ಚಿತ್ರ
ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ 41 ವರ್ಷದ ವ್ಯಕ್ತಿಯನ್ನು ನಕ್ಸಲರು ಹತ್ಯೆಗೈದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಭೈರಾಮಗಢ ಪೊಲೀಸ್ ಠಾಣಾ ವ್ಯಾಪ್ತಿಯ ಕೇಶಮುಂಡಿ ಗ್ರಾಮದ ನಿವಾಸಿ ಭದ್ರು ಸೋಧಿ ಹತ್ಯೆಯಾದವರು. ಇವರ ಮನೆಯ ಮೇಲೆ ಭಾನುವಾರ ಸಂಜೆ ದಾಳಿ ಮಾಡಿದ ನಕ್ಸಲರು ಕೊಡಲಿಯಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಾಹಿತಿ ತಿಳಿದು ಸೋಮವಾರ ಬೆಳಿಗ್ಗೆ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಘಟನಾ ಸ್ಥಳದಲ್ಲಿ ಮಾವೋವಾದಿಗಳ ಭೈರಾಮಗಢ ಪ್ರದೇಶ ಸಮಿತಿ ಕರಪತ್ರವೊಂದು ಪತ್ತೆಯಾಗಿದೆ. ಅದರಲ್ಲಿ ಮೃತನನ್ನು ದೇಶದ್ರೋಹಿ ಎಂದು ಆರೋಪಿಸಲಾಗಿದೆ. ಸೋಧಿ ಸಲ್ವಾ ಜುಡುಂ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಅಲ್ಲದೇ ಸಿಪಿಐ (ಮಾವೋವಾದಿ)ಗೆ ಸಂಬಂಧಿಸಿದ ಮಾಹಿತಿಯನ್ನು ಸೋರಿಕೆ ಮಾಡುವಲ್ಲಿ ತೊಡಗಿದ್ದರು ಎಂದು ಕರಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ದಾಳಿಕೋರರನ್ನು ಪತ್ತೆಹಚ್ಚಲು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.
ಜನವರಿ 16 ರಂದು ಬಿಜಾಪುರದ ಮಿರ್ತೂರ್ ಪ್ರದೇಶದಲ್ಲಿ ಪೊಲೀಸ್ ಮಾಹಿತಿದಾರನೆಂದು ಶಂಕಿಸಿ 48 ವರ್ಷದ ವ್ಯಕ್ತಿಯನ್ನು ನಕ್ಸಲರು ಕೊಂದಿದ್ದರು.
ಪೊಲೀಸರ ಮಾಹಿತಿಯ ಪ್ರಕಾರ, ಕಳೆದ ವರ್ಷ(2024) ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿಗಳು ನಡೆಸಿದ ಪ್ರತ್ಯೇಕ ಹಿಂಸಾಚಾರ ಘಟನೆಗಳಲ್ಲಿ 68 ನಾಗರಿಕರು ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.