ADVERTISEMENT

ಆಂಧ್ರ–ಒಡಿಶಾ ಗಡಿ ಭಾಗದಲ್ಲಿ ಕಾರ್ಯಾಚರಣೆ: ಮೂವರು ಪ್ರಮುಖ ನಕ್ಸಲರ ಹತ್ಯೆ 

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 13:17 IST
Last Updated 18 ಜೂನ್ 2025, 13:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಆಂಧ್ರಪ್ರದೇಶ–ಒಡಿಶಾ ಗಡಿ ಭಾಗದಲ್ಲಿರುವ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ಬುಧವಾರ ಮೂವರು ಪ್ರಮುಖ ನಕ್ಸಲರನ್ನು ಭದ್ರತಾಪಡೆಗಳು ಹೊಡೆದುರುಳಿಸಿವೆ. ಈ ನಕ್ಸಲರ ಬಗ್ಗೆ ಸುಳಿವು ನೀಡಿದವರಿಗೆ ₹25 ಲಕ್ಷ ಬಹುಮಾನವನ್ನೂ ಸರ್ಕಾರ ಈ ಹಿಂದೆ ಘೋಷಿಸಿತ್ತು. 

ನಕ್ಸಲರ ಕೇಂದ್ರ ಸಮಿತಿ ನಾಯಕ ಗಜರ್ಲಾ ರವಿ ಅಲಿಯಾಸ್‌ ಉದಯ್‌–ಬಿರುಸುನನ್ನು ಹತ್ಯೆ ಮಾಡಲಾಗಿದೆ. ಜತೆಗೆ ಆಂಧ್ರ –ಒಡಿಶಾ ಗಡಿ ವಿಶೇಷ ವಲಯ ಸಮಿತಿಯ ಸದಸ್ಯೆ ವೆಂಕಟ ರವಿ ಲಕ್ಷ್ಮೀ ಚೈತನ್ಯ ಅಲಿಯಾಸ್‌ ಅರುಣಾ ಹಾಗೂ ಮತ್ತೊಬ್ಬ ಸದಸ್ಯೆ ಅಂಜು ಎಂಬಾಕೆಯನ್ನೂ ಎನ್‌ಕೌಂಟರ್‌ ಮಾಡಲಾಗಿದೆ. ಘಟನಾ ಸ್ಥಳದಿಂದ 3 ಎಕೆ–47 ರೈಫಲ್‌ಗಳನ್ನು ಭದ್ರತಾ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

ಉದಯ್‌ ಬಗ್ಗೆ ಸುಳಿವು ನೀಡಿದವರಿಗೆ ₹25 ಲಕ್ಷ, ಅರುಣಾಳ ಸುಳಿವು ನೀಡಿದವರಿಗೆ ₹20 ಲಕ್ಷ ಬಹುಮಾನವನ್ನೂ ಸರ್ಕಾರ ಘೋಷಿಸಿತ್ತು. ಬುಧವಾರ ಗುಪ‍್ತಚರ ಮಾಹಿತಿಗಳನ್ನು ಆಧರಿಸಿ ನಡೆಸಿದ ಶೋಧ ಕಾರ್ಯಾಚರಣೆ ವೇಳೆ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಮೂವರನ್ನು ಹತ್ಯೆಗೈಯ್ಯಲಾಗಿದೆ. 

ADVERTISEMENT

ನಕ್ಸಲ್‌ ಚಲಪತಿಯ ಪತ್ನಿ ಅರುಣಾ:

ಒಡಿಶಾ–ಛತ್ತೀಸಗಢ ಗಡಿ ಭಾಗದಲ್ಲಿ ಜನವರಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾಗಿದ್ದ ಪ್ರಮುಖ ನಕ್ಸಲ್‌ ನಾಯಕ ಚಲಪತಿ ರಾವ್‌ ಅಲಿಯಾಸ್‌ ರಾಮಚಂದ್ರ ರೆಡ್ಡಿಯ ಪತ್ನಿಯೇ ಈಗ ಹತ್ಯೆಗೀಡಾಗಿರುವ ಅರುಣಾ. 2018ರಲ್ಲಿ ನಡೆದಿದ್ದ, ಅರಕು ಮಾಜಿ ಶಾಸಕ ಕಿಡರಿ ಸರ್ವೇಶ್ವರ್‌ ರಾವ್‌ ಹತ್ಯೆ ಹಾಗೂ ಮಾಜಿ ಶಾಸಕ ಸಿಲ್ವೇರಿ ಸೋಮು ಅವರ ಹತ್ಯೆ ಪ್ರಕರಣದಲ್ಲಿ ಅರುಣಾ ಭಾಗಿಯಾಗಿದ್ದಳು ಎನ್ನಲಾಗಿದೆ. 

‘ನಕ್ಸಲ್‌ ಚಟುವಟಿಕೆ ಶೇ 83ರಷ್ಟು ಇಳಿಕೆ’ 

2010ಕ್ಕೆ ಹೋಲಿಸಿದರೆ ದೇಶದಲ್ಲಿ ನಕ್ಸಲ್‌ ಚಟುವಟಿಕೆಯು ಶೇ83ರಷ್ಟು ಇಳಿಕೆಯಾಗಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್‌ ಕುಮಾರ್‌ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಿರ ಆಡಳಿತ ಹಾಗೂ ಕಾರ್ಯತಂತ್ರದಿಂದ ಇದು ಸಾಧ್ಯವಾಗಿದೆ ಎಂದೂ ಅವರು ಶ್ಲಾಘಿಸಿದ್ದಾರೆ.   ಹರಿಯಾಣದ ಮಾನೇಸರ್‌ನಲ್ಲಿರುವ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಕ್ಯಾಂಪಸ್‌ಗೆ ಸಚಿವ ಬುಧವಾರ ಭೇಟಿ ನೀಡಿದ್ದರು. ಈ ವೇಳೆ ಮಾತನಾಡಿದ ಅವರು ‘ನಕ್ಸಲ್‌ ಚಟುವಟಿಕೆಗಳನ್ನು ಬುಡದಿಂದಲೇ ಕಿತ್ತೊಗೆಯಲು ಸರ್ಕಾರ ಮುಂದಾಗಿದೆ. 2010ಕ್ಕೆ ಹೋಲಿಸಿದರೆ ನಕ್ಸಲ್‌ ಚಟುವಟಿಕೆಗಳ ಪ್ರಮಾಣ ಶೇ 83ರಷ್ಟು ಹಾಗೂ ಈ ಸಂಬಂಧಿತ ಸಾವುಗಳ ಪ್ರಮಾಣ ಶೇ 85ರಷ್ಟು ಕಡಿಮೆಯಾಗಿದೆ. 2026ರ ಮಾರ್ಚ್‌ ವೇಳೆಗೆ ನಕ್ಸಲ್‌ ಮುಕ್ತ ಭಾರತದ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ. ಇದು ಕೇವಲ ನಿರ್ಣಯವಲ್ಲ ಚಳವಳಿ’ ಎಂದೂ ಹೇಳಿದ್ದಾರೆ.

ಮಣಿಪುರ: ಮೂವರು ಬಂಡುಕೋರರ ಬಂಧನ

ಇಂಫಾಲ್‌: ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪುರದ ವಿವಿಧ ಪ್ರದೇಶಗಳಿಂದ ಮಂಗಳವಾರ ಮೂವರು ಬಂಡುಕೋರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.  ಬಿಷ್ಣುಪುರ ಜಿಲ್ಲೆಯ ನಿಂಗ್‌ಥೌಖೋಂಗ್‌ ಖಾ ಖುನೌ ಪ್ರದೇಶದಿಂದ ಪಿಡಬ್ಲ್ಯೂಜಿ ಸಂಘಟನೆಯ ಖೋಮ್‌ದ್ರಾಮ್‌ ಜಾಯ್‌ ಸಿಂಗ್‌ (51) ಹಾಗೂ ಮೈಬಾಮ್‌ ಮೆಮ್ಚಾ ದೇವಿ (49) ಎಂಬವರನ್ನು ಬಂಧಿಸಲಾಗಿದೆ. ಅವರಿಂದ ಪಿಸ್ತೂಲ್‌ ಹಾಗೂ ಖಾಲಿ ಮ್ಯಾಗಜಿನ್ ವಶಪಡಿಸಿಕೊಳ್ಳಲಾಗಿದೆ.   ಕೆಸಿ‍ಪಿ (ಎಂಎಫ್‌ಎಲ್‌) ಸಂಘಟನೆಯ ಯುಮ್ನಾಮ್ ಜೆನಿಕಾ (22) ಎನ್ನುವ ಮಹಿಳೆಯನ್ನು ಪೂರ್ವ ಇಂಫಾಲ್‌ ಜಿಲ್ಲೆಯಲ್ಲಿ ಬಂಧಿಸಿರುವುದಾಗಿ ತಿಳಿಸಿದ್ದಾರೆ.  ಕಾನೂನುಬಾಹಿರವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಹಾಗೂ ಫುಬಾಲಾ ಗ್ರಾಮದಲ್ಲಿ ಬೆಂಕಿ ಅವಘಡ ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಿರುವುದಾಗಿಯೂ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.