ADVERTISEMENT

ಲಡಾಕ್‌ ಗುಡ್ಡಗಾಡು ಪ್ರದೇಶ ಮಂಡಳಿ ಚುನಾವಣೆ: ಎನ್‌ಸಿ, ‘ಕೈ’ ಮೇಲುಗೈ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2023, 20:52 IST
Last Updated 8 ಅಕ್ಟೋಬರ್ 2023, 20:52 IST
...........
...........   

ಕಾರ್ಗಿಲ್ (ಲಡಾಕ್‌) (ಪಿಟಿಐ): ಲಡಾಕ್‌ನ ಗುಡ್ಡಗಾಡು ಪ್ರದೇಶ ಅಭಿವೃದ್ಧಿ ಸ್ವಾಯತ್ತ ಮಂಡಳಿಗೆ (ಎಲ್‌ಎಎಚ್‌ಡಿಸಿ–ಕಾರ್ಗಿಲ್) ನಡೆದ ಚುನಾವಣೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ (ಎನ್‌.ಸಿ) ಹಾಗೂ ಕಾಂಗ್ರೆಸ್ ಒಟ್ಟು 22 ಸ್ಥಾನಗಳಲ್ಲಿ ಜಯಭೇರಿ ಬಾರಿಸಿವೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದತಿಯಾದ ನಂತರ, ಲಡಾಕ್‌ ಅನ್ನು ಕೇಂದ್ರಾಡಳಿತ ಪ್ರದೇಶವಾಗಿ ರಚಿಸಿದ ಬಳಿಕ ನಡೆದ ಮೊದಲ ಚುನಾವಣೆ ಇದಾಗಿದೆ.

ಮಂಡಳಿಯ ಸದಸ್ಯರ ಬಲ ಒಟ್ಟು 30. ಈ ಪೈಕಿ ಆಡಳಿತ ವಿಭಾಗದಿಂದ ನಾಲ್ವರನ್ನು ನಾಮನಿರ್ದೇಶನ ಮಾಡಲಾಗುತ್ತದೆ. ಉಳಿದ 26 ಸ್ಥಾನಗಳಿಗೆ ಅಕ್ಟೋಬರ್‌ 4ರಂದು ಚುನಾವಣೆ ನಡೆದಿತ್ತು.

ADVERTISEMENT

ನ್ಯಾಷನಲ್‌ ಕಾನ್ಫರೆನ್ಸ್‌ 12 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್‌ 10 ಸ್ಥಾನಗಳಲ್ಲಿ ವಿಜಯ ಪತಾಕೆ ಹಾರಿಸಿದೆ. ಬಿಜೆಪಿ ಎರಡು ಸ್ಥಾನಕ್ಕಷ್ಟೇ ತೃಪ್ತಿ‍ಪಟ್ಟಿದೆ. ಇಬ್ಬರು ಪಕ್ಷೇತರರು ಜಯಗಳಿಸಿದ್ದಾರೆ.

ಒಟ್ಟು 95,388 ಮತದಾರರ ಪೈಕಿ 74,026 ಮಂದಿ ಮತ ಚಲಾಯಿಸುವ ಮೂಲಕ ಶೇ 77.61ರಷ್ಟು ಮತದಾನವಾಗಿತ್ತು. ಮಂಡಳಿಯ ಅಧ್ಯಕ್ಷರಾಗಿದ್ದ ನ್ಯಾಷನಲ್‌ ಕಾನ್ಫರೆನ್ಸ್‌ನ ಫಿರೋಜ್ ಅಹ್ಮದ್ ಖಾನ್ ಅವರ ಐದು ವರ್ಷದ ಅಧಿಕಾರಾವಧಿಯು ಈಗಾಗಲೇ ಪೂರ್ಣಗೊಂಡಿದೆ. ಅಕ್ಟೋಬರ್‌ 11ರೊಳಗೆ ಹೊಸ ಮಂಡಳಿ ಅಸ್ತಿತ್ವಕ್ಕೆ ಬರಲಿದೆ.

ಚುನಾವಣಾ ಪೂರ್ವದಲ್ಲಿ ಎನ್‌.ಸಿ ಮತ್ತು ಕಾಂಗ್ರೆಸ್‌ ಮೈತ್ರಿ ಘೋಷಿಸಿದ್ದವು. ಆದರೆ, ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 

ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಒಂದು ಸ್ಥಾನದಲ್ಲಷ್ಟೇ ಗೆದ್ದಿತ್ತು. ಆದರೆ, ಪಿಡಿಪಿಯ ಇಬ್ಬರು ಸದಸ್ಯರು ಕಮಲ ಪಾಳೆಯಕ್ಕೆ ಸೇರಿದ್ದರಿಂದ ಪಕ್ಷದ ಸದಸ್ಯರ ಬಲ ಮೂರಕ್ಕೇರಿತ್ತು. ಈ ಬಾರಿ 17 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು.

ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದ ಆಮ್‌ ಆದ್ಮಿ ಪಕ್ಷವು ಖಾತೆ ತೆರೆಯಲು ವಿಫಲವಾಗಿದೆ. ಒಟ್ಟು 25 ಮಂದಿ ಪಕ್ಷೇತರರಾಗಿ ಸ್ಪರ್ಧಿಸಿದ್ದರು. 

278 ಮತಗಟ್ಟೆಗಳಲ್ಲಿ ನಡೆದ ಚುನಾವಣೆಗೆ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.