ADVERTISEMENT

ಎನ್‌ಸಿಪಿ ಬಣಗಳ ವಿಲೀನ ವದಂತಿಯಷ್ಟೇ: ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್

ಪಿಟಿಐ
Published 14 ಮೇ 2025, 12:53 IST
Last Updated 14 ಮೇ 2025, 12:53 IST
ಅಜಿತ್ ಪವಾರ್, ಶರದ್ ಪವಾರ್
ಅಜಿತ್ ಪವಾರ್, ಶರದ್ ಪವಾರ್   

ಮುಂಬೈ: ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ಎರಡು ಬಣಗಳು ಶೀಘ್ರದಲ್ಲೇ ಒಂದಾಗಲಿವೆ ಎಂಬುದು ವದಂತಿಯಷ್ಟೇ ಎಂದು ಮಹಾರಾಷ್ಟ್ರ ಸಚಿವ ಮತ್ತು ಬಿಜೆಪಿ ನಾಯಕ ಚಂದ್ರಕಾಂತ್‌ ಪಾಟೀಲ್‌ ಬುಧವಾರ ಹೇಳಿದ್ದಾರೆ.

ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿ ಹಾಗೂ ಶರದ್‌ ಪವಾರ್‌ ಅವರ ಎನ್‌ಸಿಪಿ (ಎಸ್‌ಪಿ) ಬಣಗಳು ಒಂದಾಗಲಿವೆ ಎಂಬ ಸುದ್ದಿ ಹರಿದಾಡಿತ್ತು.

ಮಾಧ್ಯಮದವರೊಂದಿಗೆ ಮಾತನಾಡಿರುವ ಚಂದ್ರಕಾಂತ್‌ ಪಾಟೀಲ್‌, 'ವೀಲಿನದ ವದಂತಿಗಳು ಯಾವುದೇ ರೂಪ ಪಡೆದುಕೊಂಡಿಲ್ಲ. ಅವು ಊಹಾಪೋಹವಾಗಿಯೇ ಉಳಿದಿದ್ದು, ಕಾರ್ಯರೂಪಗೊಳ್ಳುವ ನಿಟ್ಟಿನಲ್ಲಿ ಏನೂ ಆಗಿಲ್ಲ' ಎಂದು ಹೇಳಿದ್ದಾರೆ.

ADVERTISEMENT

ಎನ್‌ಸಿಪಿಯಲ್ಲಿ ಒಡಕು ಮೂಡುವ ಮುನ್ನ, ಶರದ್‌ ಪವಾರ್‌, ಅವರ ಮಗಳು ಸುಪ್ರಿಯಾ ಸುಳೆ ಮತ್ತು ಅವರ ಸಂಬಂಧಿ ಅಜಿತ್‌ ಪವಾರ್‌ ಅವರು ಪಕ್ಷದಲ್ಲಿ ಪ್ರಭಾವ ಹೊಂದಿದ್ದರು ಎಂದಿದ್ದಾರೆ.

ಶರದ್‌ ಪವಾರ್‌ ಅವರು 1999ರಲ್ಲಿ ಎನ್‌ಸಿಪಿ ಸ್ಥಾಪಿಸಿದ್ದರು. ಆದರೆ, ಶರದ್‌ ಅವರ ಸಂಬಂಧಿಯೂ ಆಗಿರುವ ಅಜಿತ್‌ ಪವಾರ್‌ ಅವರು 2023ರ ಜುಲೈನಲ್ಲಿ ತಮ್ಮ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ, ಶಿವಸೇನಾ ನೇತೃತ್ವದ 'ಮಹಾಯುತಿ' ಮೈತ್ರಿ ಸರ್ಕಾರದೊಂದಿಗೆ ಕೈಜೋಡಿಸುವ ಮೂಲಕ ಪಕ್ಷದಲ್ಲಿ ಒಡಕು ಮೂಡಿತ್ತು.

ಕಾನೂನು ಸಮರದ ಬಳಿಕ, 2024ರ ಲೋಕಸಭೆ ಚುನಾವಣೆಗೂ ಮುನ್ನ ಪಕ್ಷದ ಅಧಿಕೃತ ಹೆಸರು, ಚಿಹ್ನೆ ಅಜಿತ್‌ ಪವಾರ್‌ ಬಣಕ್ಕೆ ಒಲಿದಿದ್ದವು. ಶರದ್‌ ಬಣಕ್ಕೆ ಎನ್‌ಸಿಪಿ (ಶರದ್‌ಚಂದ್ರ ಪವಾರ್‌) ಎಂಬ ಹೆಸರು ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.