ADVERTISEMENT

ಅಣುಶಕ್ತಿ: ಖಾಸಗಿ ಕ್ಷೇತ್ರಕ್ಕೂ ಅವಕಾಶ; ಮಸೂದೆಗೆ ಲೋಕಸಭೆ ಅಸ್ತು

ಜೆಪಿಸಿ ಒಪ್ಪಿಸಲು ಒತ್ತಾಯಿಸಿ ವಿಪಕ್ಷಗಳ ಸಭಾತ್ಯಾಗ

ಪಿಟಿಐ
Published 17 ಡಿಸೆಂಬರ್ 2025, 16:17 IST
Last Updated 17 ಡಿಸೆಂಬರ್ 2025, 16:17 IST
ಲೋಕಸಭೆಯಲ್ಲಿ ಬುಧವಾರ ಅಣು ಶಕ್ತಿ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮಾತನಾಡಿದರು –ಪಿಟಿಐ ಚಿತ್ರ 
ಲೋಕಸಭೆಯಲ್ಲಿ ಬುಧವಾರ ಅಣು ಶಕ್ತಿ ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಮಾತನಾಡಿದರು –ಪಿಟಿಐ ಚಿತ್ರ    

ನವದೆಹಲಿ: ಅಣು ವಿದ್ಯುತ್‌ ಕ್ಷೇತ್ರದಲ್ಲಿ ಖಾಸಗಿ ಹೂಡಿಕೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಬುಧವಾರ ಅಂಗೀಕರಿಸಲಾಯಿತು.

ಕೂಲಂಕಷ ಪರಾಮರ್ಶೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಒಪ್ಪಿಸಬೇಕು ಎಂಬ ವಿರೋಧ ಪಕ್ಷಗಳ ಬೇಡಿಕೆಗೆ ಕೇಂದ್ರ ಸರ್ಕಾರ ಒಪ್ಪಲಿಲ್ಲ. ನಂತರ, ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದರು.

ಇದರ ನಡುವೆಯೇ, ‘ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆ’ಯನ್ನು ಧ್ವನಿಮತ ಮೂಲಕ ಸದನ ಅಂಗೀಕರಿಸಿತು.

ADVERTISEMENT

ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ‘2047ರ ವೇಳೆಗೆ 100 ಗಿಗಾವಾಟ್ ಅಣು ವಿದ್ಯುತ್‌ ಉತ್ಪಾದನೆ ಗುರಿ ಸಾಧಿಸಲು ಈ ಮಸೂದೆ ನೆರವಾಗಲಿದೆ’ ಎಂದು ಹೇಳಿದರು.

‘ಈ ಮಸೂದೆ ಮೈಲುಗಲ್ಲಾಗಿದ್ದು, ದೇಶದ ಅಭಿವೃದ್ಧಿ ಪಯಣಕ್ಕೆ ಹೊಸ ದಿಕ್ಕು ತೋರಲಿದೆ’ ಎಂದರು.

‘ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಛಾಪು ಮೂಡಿಸಬೇಕು ಎಂದಾದಲ್ಲಿ, ಜಾಗತಿಕ ರಾಜಕಾರಣದಲ್ಲಿ ಭಾರತ ಮಹತ್ವದ ಪಾತ್ರ ವಹಿಸಲೇಬೇಕು. ಜಗತ್ತಿನ ವಿವಿಧೆಡೆ ಬಳಸುತ್ತಿರುವ ಕಾರ್ಯತಂತ್ರಗಳನ್ನು ನಾವು ಅನುಸರಿಸಬೇಕು’ ಎಂದು ಹೇಳಿದರು.

ಪರ–ವಿರೋಧ ಮಾತು: ಇದಕ್ಕೂ ಮುನ್ನ ನಡೆದ ಚರ್ಚೆ ವೇಳೆ, ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟದ ಸಂಸದರು ಈ ಮಸೂದೆಯನ್ನು ಬೆಂಬಲಿಸಿದರೆ, ವ್ಯಾಪಕ ಸಮಾಲೋಚನೆಗಳಿಗಾಗಿ ಈ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ(ಜೆಪಿಸಿ) ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳ ಸಂಸದರು ಪಟ್ಟು ಹಿಡಿದರು.

ವಿದ್ಯುತ್ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯನ್ನಾಗಿ ಮಾಡಲು ಈ ಮಸೂದೆ ನೆರವಾಗಲಿದೆ ಎಂಬುದು ಎನ್‌ಡಿಯ ಪಾಳಯದ ಸಂಸದರ ಪ್ರತಿಪಾದನೆಯಾದರೆ, ಈ ಕ್ಷೇತ್ರವನ್ನು ಖಾಸಗಿ ವಲಯಕ್ಕೆ ಮುಕ್ತಗೊಳಿಸುವುದು ಅಪಾಯಕಾರಿ ಎಂದು ಹೇಳುವ ಮೂಲಕ ವಿಪಕ್ಷಗಳ ಸಂಸದರು ಮಸೂದೆಗೆ ಬಲವಾದ ಪ್ರತಿರೋಧ ವ್ಯಕ್ತಪಡಿಸಿದರು.

- ಜಗತ್ತು ಈಗ ಶುದ್ಧ ಇಂಧನ ಯುಗದತ್ತ ಹೆಜ್ಜೆ ಹಾಕುತ್ತಿದೆ. ನಾವು ಕೂಡ 2047ರ ವೇಳೆಗೆ 100 ಗಿಗಾವಾಟ್ ಅಣುಶಕ್ತಿ ಉತ್ಪಾದಿಸುವ ಗುರಿ ನಿಗದಿ ಮಾಡಿದ್ದೇವೆ
ಜಿತೇಂದ್ರ ಸಿಂಗ್, ಕೇಂದ್ರ ಸಚಿವ

ಬಿಜೆಪಿಯ ಶಶಾಂಕ ಮಣಿ ಮಾತನಾಡಿ, ‘ನಾಗರಿಕ ಅಣು ವಿದ್ಯುತ್‌ ಕ್ಷೇತ್ರ ಪ್ರವೇಶಿಸುವುದಕ್ಕೆ ಖಾಸಗಿಯವರಿಗೂ ಅವಕಾಶ ಕಲ್ಪಿಸುವುದರಿಂದ ಪ್ರತಿಯೊಬ್ಬ ಭಾರತೀಯನಿಗೂ ಪ್ರಯೋಜನವಾಗಲಿದೆ’ ಎಂದು ಹೇಳಿದರು.

ಈ ಮಸೂದೆಯನ್ನು ಬಲವಾಗಿ ವಿರೋಧಿಸಿದ ಕಾಂಗ್ರೆಸ್‌ನ ಮನೀಷ್ ತಿವಾರಿ,‘ಅಣುಸ್ಥಾವರಗಳಿಗೆ ಅಗತ್ಯವಿರುವ ಉಪಕರಣಗಳನ್ನು ಪೂರೈಕೆ ಮಾಡುವವರಿಗೆ ಹೊಣೆಗಾರಿಕೆ ನಿಗದಿ ಮಾಡುವ ನಿಬಂಧನೆಯನ್ನು ಪ್ರಸ್ತಾವಿತ ಮಸೂದೆಯಲ್ಲಿ ತೆಗೆದು ಹಾಕಲಾಗಿದೆ. ಅಣು ಸ್ಥಾವರಗಳಲ್ಲಿ ಅವಘಡಗಳು ಸಂಭವಿಸಿದಲ್ಲಿ ಅದು ದೇಶಕ್ಕೆ ಭಾರಿ ಹಾನಿಗೆ ಕಾರಣವಾಗಲಿದೆ’ ಎಂದರು.

ಅಣು ಶಕ್ತಿ ಕಾಯ್ದೆ–1962 ಹಾಗೂ ನಾಗರಿಕ ಹೊಣೆಗಾರಿಕೆ (ಪರಮಾಣು ಹಾನಿ) ಕಾಯ್ದೆ–2010ರಲ್ಲಿದ್ದ ಅಂಶಗಳನ್ನು ನೂತನ ಮಸೂದೆಯಲ್ಲಿ ತೆಗೆದು ಹಾಕಿರುವುದಕ್ಕೂ ತಿವಾರಿ ವಿರೋಧ ವ್ಯಕ್ತಪಡಿಸಿದರು.

‘ಈ ಮಸೂದೆ ಕುರಿತು ಕೂಲಂಕಷ ಪರಿಶೀಲನೆ ಅಗತ್ಯ ಇದೆ. ಹೀಗಾಗಿ ಇದನ್ನು ಜಂಟಿ ಸದನ ಸಮಿತಿಗೆ ಒಪ್ಪಿಸಬೇಕು’ ಎಂದು ತಿವಾರಿ ಆಗ್ರಹಿಸಿದರು.

ಈ ವಿಷಯವಾಗಿ ಮಾತನಾಡಿದ ಡಿಎಂಕೆಯ ಅರುಣ್‌ ನೆಹರು, ಟಿಎಂಸಿಯ ಸೌಗತ ರಾಯ್‌, ಶಿವಸೇನಾದ(ಯುಬಿಟಿ) ಅರವಿಂದ ಸಾವಂತ್ ಕೂಡ, ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಯಾರು ಏನಂದರು?

ಅಣು ಶಕ್ತಿ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಈ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಹೊರಟಿರುವುದು ಅಪಾಯಕಾರಿ ನಡೆ. ಜನರ ಸುರಕ್ಷತೆ ಪರಿಸರ ಸಂರಕ್ಷಣೆ ಹಾಗೂ ಸಂತ್ರಸ್ತರಿಗೆ ನ್ಯಾಯ ಒದಗಿಸುವುದನ್ನು ಕಡೆಗಣಿಸಿ ಈ ಕ್ಷೇತ್ರದಲ್ಲಿ ಖಾಸಗಿಯವರಿಗೆ ಮಣೆ ಹಾಕುವುದು ಸರಿಯಲ್ಲ –ಶಶಿ ತರೂರ್‌ ಕಾಂಗ್ರೆಸ್‌ ಸದಸ್ಯ

ಸಾರ್ವಜನಿಕ ವಲಯದ ಸಂಸ್ಥೆಯೊಂದು ಒದಗಿಸುವಷ್ಟೇ ಸುರಕ್ಷತೆಯನ್ನು ಖಾಸಗಿ ಕಂಪನಿಯೊಂದು ಕಲ್ಪಿಸುತ್ತದೆ ಎಂಬುದನ್ನು ಸರ್ಕಾರಿ ಹೇಗೆ ಖಾತ್ರಿಪಡಿಸುತ್ತದೆ –ಅರವಿಂದ ಸಾವಂತ್ ಶಿವಸೇನಾ(ಯುಬಿಟಿ) ಸದಸ್ಯ

ಅಣು ವಿದ್ಯುತ್‌ ಸ್ಥಾವರಗಳ ಕಾರ್ಯಾಚರಣೆಗೆ ಪರವಾನಗಿ ನೀಡುವ ವ್ಯವಸ್ಥೆ ಅತ್ಯುತ್ತಮವಾಗಿರುವಂತೆ ನೋಡಿಕೊಳ್ಳಬೇಕು. ವಿಕಿರಣಶೀಲ ತ್ಯಾಜ್ಯ ವಿಲೇವಾರಿಗೆ ವಿಶೇಷ ಅವಕಾಶಗಳನ್ನು ಕಲ್ಪಿಸಬೇಕು –ಅಲೋಕ್‌ ಕುಮಾರ್‌ ಸುಮನ್ ಜೆಡಿಯು ಸದಸ್ಯ

ವಿಕಿರಣಶೀಲ ಧಾತುಗಳ ಸುರಕ್ಷತೆಗೆ ಸಂಬಂಧಿಸಿದ ವಿಶೇಷ ಅಧಿಕಾರವನ್ನು ಸರ್ಕಾರ ತನ್ನ ಬಳಿಯೆ ಇಟ್ಟುಕೊಂಡಿದೆ. ಇದರಿಂದ ಈ ಕ್ಷೇತ್ರದಲ್ಲಿ ಆವಿಷ್ಕಾರವನ್ನು ಖಾಸಗಿಯವರು ಮಾಡಿದರೆ ಅದರ ನಿಯಂತ್ರಣ ಸರ್ಕಾರದ ಕೈಯಲ್ಲಿಯೇ ಇರಲಿದೆ – ಧೈರ್ಯಶೀಲ ಸಂಭಾಜಿರಾವ್ ಮಾನೆ ಶಿವಸೇನಾ ಸದಸ್ಯ

ಅಮೆರಿಕ ಹಾಗೂ ಫ್ರಾನ್ಸ್‌ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಆಹ್ವಾನಿಸುವ ಪ್ರಯತ್ನ ಇದಾಗಿದೆ. ಖಾಸಗಿಯವರಿಗೆ ಅವಕಾಶ ನೀಡಿದರೆ ನಿಮ್ಮ ‘ಮೇಕ್‌ ಇನ್‌ ಇಂಡಿಯಾ’ ಕಾರ್ಯಕ್ರಮದ ಗತಿ ಏನು? –ಆದಿತ್ಯ ಯಾದವ್ ಸಮಾಜವಾದಿ ಪಕ್ಷದ ಸದಸ್ಯ

ಅಣು ವಿದ್ಯುತ್‌ ಉತ್ಪಾದನೆಗೆ ಬೇಕಾದ ಕಚ್ಚಾ ವಸ್ತುಗಳು ಅಗತ್ಯ ಪ್ರಮಾಣದಲ್ಲಿ ಭಾರತದಲ್ಲಿ ಇಲ್ಲ. ಈ ಮಸೂದೆ ಮೂಲಕ ಸರ್ಕಾರವು ವಿದೇಶಿ ಹೂಡಿಕೆ ಹಾಗೂ ಕಚ್ಚಾವಸ್ತುಗಳನ್ನು ತರುವ ಜವಾಬ್ದಾರಿಯನ್ನು ಖಾಸಗಿ ಕಂಪನಿಗಳಿಗೆ ವಹಿಸುತ್ತಿದೆ –ಸೌಗತ ರಾಯ್ ಟಿಎಂಸಿ ಸದಸ್ಯ

ವಿಪಕ್ಷಗಳ ವಾದ

* ಅಣು ಸ್ಥಾವರಗಳಲ್ಲಿನ ವಿಕಿರಣಶೀಲ ತ್ಯಾಜ್ಯ(ರೇಡಿಯೊ ಆ್ಯಕ್ಟಿವ್ ವೇಸ್ಟ್) ನಿರ್ವಹಣೆ ಕುರಿತಂತೆ ಮಸೂದೆಯಲ್ಲಿ ಯಾವುದೇ ಚೌಕಟ್ಟು ಇಲ್ಲ

* ಈ ಮಸೂದೆ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರನ್ನು ಓಲೈಸಲು ಯತ್ನಿಸುತ್ತಿದೆ. ಆ ಮೂಲಕ ಅಮೆರಿಕ ಹೇರಿರುವ ಪ್ರತಿಸುಂಕವನ್ನು ತಗ್ಗಿಸುವ ಉದ್ದೇಶ ಹೊಂದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.