ADVERTISEMENT

ಪುದುಚೇರಿ: ಸಿಎಂ ಅಭ್ಯರ್ಥಿ ಆಯ್ಕೆ, ಕ್ಷೇತ್ರ ಹಂಚಿಕೆ ವಿಚಾರ; ಎನ್‌ಡಿಎ ಸಭೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 2:48 IST
Last Updated 5 ಮಾರ್ಚ್ 2021, 2:48 IST
ಬಿಜೆಪಿ ಪಕ್ಷದ ಬಾವುಟ
ಬಿಜೆಪಿ ಪಕ್ಷದ ಬಾವುಟ   

ಪುದುಚೇರಿ: ಕ್ಷೇತ್ರ ಹಂಚಿಕೆ ಹಾಗೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಲುವಾಗಿ ಎನ್‌ಡಿಎ ಮೈತ್ರಿಕೂಟವು ಎರಡು ದಿನಗಳಲ್ಲಿ ಸಭೆ ನಡೆಸಲಿದೆ ಎಂದು ಬಿಜೆಪಿ ನಾಯಕ ವಿ. ಸ್ವಾಮಿನಾಥನ್‌ ತಿಳಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಗುರುವಾರ ಮಾತನಾಡಿರುವ ಅವರು,ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿಕೇಂದ್ರದ ಮಾಜಿ ಸಚಿವ ಮೆಕ್‌ಗೋವನ್‌ ಅವರು ಹಲವು ಕ್ರಿಯಾ ಸಮಿತಿಗಳನ್ನು ರಚಿಸಿದ್ದಾರೆ. ಮಾಜಿ ಸಚಿವ ನಮಃಶಿವಾಯಂ ಅವರ ನೇತೃತ್ವದಲ್ಲಿ12 ಸದಸ್ಯರ ಸಮಿತಿ ರಚಿಸಲಾಗಿದೆʼ ಎಂದು ಹೇಳಿದ್ದಾರೆ.

ಮುಂದುವರಿದು,ಜನರ ಅಭಿಪ್ರಾಯ ಮತ್ತು ಬಯಕೆಗಳಿಗೆ ಅನುಸಾರವಾಗಿ ಚುನಾವಣಾ ವರದಿಯನ್ನು ಸಿದ್ಧಪಡಿಸಲಾಗುವುದು ಎಂದಿರುವ ಅವರು, ತಮ್ಮ ನೇತೃತ್ವದಲ್ಲಿಯೂ 11 ಜನರಿರುವ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಎನ್‌ಆರ್‌ ಕಾಂಗ್ರೆಸ್ ಪಕ್ಷವು‌ ಮೈತ್ರಿಕೂಟದಲ್ಲಿ ಇದೆಯೇ? ಅಥವಾ ಇಲ್ಲವೇ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸ್ವಾಮಿನಾಥನ್‌, ಎನ್‌ಆರ್ ಕಾಂಗ್ರೆಸ್ ಎನ್‌ಡಿಎಯ ಭಾಗವಾಗಿದೆ. ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಮತ್ತು ಕ್ಷೇತ್ರಗಳ ಹಂಚಿಕೆ ಸಂಬಂಧ ಎರಡು ದಿನಗಳಲ್ಲಿ ಎನ್‌ಡಿಎ ನಾಯಕರ ಸಭೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಚುನಾವಣೆಗೆ ಸಂಬಂಧಿಸಿದಂತೆಮೆಕ್‌ಗೋವನ್‌ ಸೇರಿದಂತೆ ಹಲವು ಹಿರಿಯ ನಾಯಕರು ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.

ಈ ಕೇಂದ್ರಾಡಳಿತ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಐದು ವರ್ಷಗಳ ಆಡಳಿತ ಪೂರ್ಣಗೊಳಿಸದೆ ಪತನಗೊಂಡಿತ್ತು. ಮೂವರು ನಾಮನಿರ್ದೇಶಿತ ಸದಸ್ಯರೂ ಸೇರಿದಂತೆ ಒಟ್ಟು 33 ಸದಸ್ಯ ಬಲದ ವಿಧಾನಸಭೆಗೆ ಕಾಂಗ್ರೆಸ್‌ನ ಐವರು ಮತ್ತು ಡಿಎಂಕೆಯ ಒಬ್ಬ ಶಾಸಕರು ರಾಜೀನಾಮೆ ನೀಡಿದ್ದರು.ಹೀಗಾಗಿ ವಿಶ್ವಾಸಮತ ಸಾಬೀತು ಮಾಡುವಲ್ಲಿ ವಿಫಲರಾದಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಅವರು ಫೆಬ್ರವರಿ 22 ರಂದುತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆಯನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ಫೆ. 23 ರಂದು ಅಂಗೀಕರಿಸಿದ್ದರು.

ಏಪ್ರಿಲ್‌ 6ರಂದು ಚುನಾವಣೆ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ. ಈ ಹಿನ್ನಲೆಯಲ್ಲಿಕೋವಿಡ್-‌19 ಅನ್ನು ಗಮನದಲ್ಲಿರಿಸಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ. ಭದ್ರತೆಯ ದೃಷ್ಟಿಯಿಂದಕೇಂದ್ರ ಸಶಸ್ತ್ರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.