ADVERTISEMENT

200 ಅಡಿ ಕೊಳವೆಬಾವಿಗೆ ಬಿದ್ದ 6 ವರ್ಷದ ಬಾಲಕ ಬದುಕಿದ: ಶಹಬ್ಬಾಸ್ ಎನ್‌ಡಿಆರ್‌ಎಫ್

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2019, 13:43 IST
Last Updated 21 ಫೆಬ್ರುವರಿ 2019, 13:43 IST
   

ಪುಣೆ:ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕ ಹಠಾತ್ತನೇ200 ಅಡಿ ಆಳದ ತೆರೆದ ಕೊಳವೆ ಬಾವಿಗೆ ಬಿದ್ದು 13 ಗಂಟೆಗಳ ಕಾಲ ಯಾತನೆ ಅನುಭವಿಸಿ ಪವಾಡ ರೀತಿಯಲ್ಲಿ ಸಾವನ್ನೇಗೆದ್ದು ಬಂದಿರುವ ಘಟನೆ ಪುಣೆಯಿಂದ ವರದಿಯಾಗಿದೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌)ಅಧಿಕಾರಿಗಳು ಗುರುವಾರ ಯಶಸ್ವಿ ಕಾರ್ಯಾಚರಣೆ ನಡೆಸಿ ಬಾಲಕನ್ನು ರಕ್ಷಣೆ ಮಾಡಿದ್ದಾರೆ.

ಕೊಳವೆಬಾವಿಗೆ ಬಿದ್ದು ಸಾವಿನ ದವಡೆಯಿಂದ ಪಾರಾದ ಬಾಲಕನೇ ರವಿ ಪಂಡಿತ್‌ ಭಿಲ್‌. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಅಂಬೆಗಾವ್‌ ತಾಲ್ಲೂಕಿನ ಥೊರಾಂದ್ಲೆ ಗ್ರಾಮದಲ್ಲಿ. ಬಾಲಕ ರವಿ ತಂದೆ ಪಂಡಿತ್‌ ದಶರಥ್‌ ಭಿಲ್‌ ಕೂಲಿ ಕಾರ್ಮಿಕನಾಗಿದ್ದು ಇವರು ಮೂಲತಪರೋಲ್‌ ತಾಲ್ಲೂಕಿನ ಶೆಗಾಂವ್ ಗ್ರಾಮದವರು.

ದಶರಥ್‌ಜೀವನ ನಿರ್ವಹಣೆಗಾಗಿ ರಸ್ತೆ ಕೆಲಸಗಳನ್ನು ಮಾಡುತ್ತಾರೆ. ಥೊರಾಂದ್ಲೆ ಗ್ರಾಮದಲ್ಲಿ ನಡೆಯುತ್ತಿದ್ದ ರಸ್ತೆ ಕಾಮಗಾರಿಯೊಂದರಲ್ಲಿ ದಶರಥ್‌ ಕೆಲಸ ಮಾಡುತ್ತಿದ್ದರು. ಕಾಮಗಾರಿ ಸ್ಥಳಕ್ಕೆ ಮಗನನ್ನು ಕರೆದುಕೊಂಡು ಬಂದಿದ್ದರು. ಬಯಲಲ್ಲಿ ರವಿಯನ್ನು ಆಟವಾಡಲು ಬಿಟ್ಟು ರಸ್ತೆ ಕೆಲಸದಲ್ಲಿ ನಿರತರಾಗಿದ್ದರು. ಆಟವಾಡುತ್ತಿದ್ದ ರವಿ 4.30ರ ಸುಮಾರಿಗೆ ಕಾಮಗಾರಿ ಸ್ಥಳದ ಸಮೀಪದಲ್ಲಿದ್ದ ತೆರೆದ ಕೊಳವೆ ಬಾವಿಗೆ ಬಿದ್ದು 10 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ. ರವಿ ಕಾಣದಿದ್ದಾಗ ಆತಂಕಗೊಂಡ ದಶರಥ್‌ ಹುಡುಕಾಟ ನಡೆಸಿದರು. ಈ ವೇಳೆ ಕೊಳವೆ ಬಾವಿಯಲ್ಲಿ ಮಗನ ನರಳಾಟ ಕೇಳಿಸಿಕೊಂಡು ಸ್ಥಳೀಯರ ನೆರವಿಗೆ ಧಾವಿಸಿದರು.

ಸ್ಥಳೀಯರು ದೂರು ನೀಡಿದ ಕೆಲವೇ ನಿಮಿಷಗಳಲ್ಲಿಪೊಲೀಸರು ಮತ್ತು ಆಗ್ನಿಶಾಮಕ ಸಿಬ್ಬಂದಿಗಳು ಸ್ಥಳಿಕ್ಕೆ ಆಗಮಿಸಿದರು. ರಕ್ಷಣಾ ಪರಿಕರಗಳ ಕೊರತೆಯಿಂದ ಅವರಿಗೆ ಕಾರ್ಯಾಚರಣೆ ನಡೆಸಲು ಸಾಧ್ಯವಾಗಲಿಲ್ಲ. ನಂತರ ಪೊಲೀಸರು ಎನ್‌ಡಿಆರ್‌ಎಫ್‌ಗೆ ಮಾಹಿತಿ ರವಾನಿಸುತ್ತಾರೆ. ರಾತ್ರಿ 8 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಎನ್‌ಡಿಆರ್‌ಎಫ್‌ನ 5 ನೇ ಬೆಟಾಲಿಯನ್‌ ತಂಡ ರಾತ್ರಿ ಪೂರ್ತಿ ಕಾರ್ಯಾಚರಣೆ ನಡೆಸಿ ಬಾಲಕನನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗುತ್ತದೆ.

ರವಿ ಪಂಡಿತ್‌ಸಿಲುಕಿದ್ದ ಬಾವಿಗೆ ಸಮನಾಂತರವಾಗಿ ಗುಂಡಿ ತೆಗೆದು, ಅಡ್ಡ ಸಿಲುಕಿದ್ದ ಬಂಡೆಯನ್ನುಡ್ರಿಲ್ಲಿಂಗ್‌ ಮೂಲಕ ಕೊರೆದುಶಿಪ್ಪಿಂಗ್‌ ಹ್ಯಾಮರ್‌ಗಳ ಮೂಲಕ ರಕ್ಷಣೆ ಮಾಡಲಾಯಿತು ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಗಳು ಹೇಳುತ್ತಾರೆ.

ಬಾಲಕ ಕೊಳವೆಬಾವಿಗೆ ಬಿದ್ದ ಸಮಯ 4.30, ನಮಗೆ ಮಾಹಿತಿ ದೊರೆತದ್ದು 5.40ರ ಸುಮಾರಿಗೆ, ಆಗ ನಾವು ಇಲ್ಲಿಂದ 60 ಕಿ.ಮೀ ದೂರದಲ್ಲಿರುವ ಮಾವಲ್‌ ಗ್ರಾಮದಲ್ಲಿ ಇದ್ದೆವು, ಅಲ್ಲಿಂದ ಇಲ್ಲಿಗೆ ಬಂದಾಗ ರಾತ್ರಿ 8 ಗಂಟೆಯಾಗಿತ್ತು. ಅಗ್ನಿಶಾಮಕ ಸಿಬ್ಬಂದಿಗಳು ಬಾಲಕನಿಗೆ ಆಮ್ಲಜನಕ ಪೂರೈಕೆ ಮಾಡುತ್ತಿದ್ದರು, ಅದೃಷ್ಟವಶಾತ್‌ ಆ ಬಾಲಕ ತೆಲೆ ಕೆಳಗಾಗಿ ಬಿದ್ದಿರಲಿಲ್ಲ ಎಂದು ಎನ್‌ಡಿಆರ್‌ಎಫ್‌ ತಂಡದ ಅಧಿಕಾರಿಗಳು ಮಾಹಿತಿ ನೀಡಿದರು.

ಕೊಳವೆ ಬಾವಿಗೆ ಬಿದಿದ್ದ ರವಿಗೆ ಸಣ್ಣ ಪುಟ್ಟ ಗಾಯಗಳು ಆಗಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.