ADVERTISEMENT

ತೌಕ್ತೆ ಚಂಡಮಾರುತ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಎನ್‌ಡಿಆರ್‌ಎಫ್‌ ತಂಡ ನಿಯೋಜನೆ

ಪಿಟಿಐ
Published 14 ಮೇ 2021, 9:44 IST
Last Updated 14 ಮೇ 2021, 9:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ತೌಕ್ತೆ ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ ಸೇರಿ ಐದು ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 53 ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅರಬ್ಬಿ ಸಮುದ್ರದ ಪೂರ್ವಭಾಗದಲ್ಲಿ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್ ಮತ್ತು ಮಹಾರಾಷ್ಟ್ರ ಕರಾವಳಿ ಪ್ರದೇಶಗಳಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಆರ್‌ಎಫ್‌ ಪ್ರಧಾನ ನಿರ್ದೇಶಕ ಎಸ್.ಎನ್‌.ಪ್ರಧಾನ್ ತಿಳಿಸಿದ್ದಾರೆ.

ADVERTISEMENT

53 ತಂಡಗಳ ಪೈಕಿ 24 ಈಗಾಗಲೇ ಕಾರ್ಯಾಚರಣೆ ಸನ್ನದ್ಧವಾಗಿವೆ. ಉಳಿದವುಗಳನ್ನು ಯಾವುದೇ ಕ್ಷಣದಲ್ಲೂ ಕಾರ್ಯಾಚರಣೆಗೆ ಸಿದ್ಧವಾಗುವಂತೆ ಇರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಎನ್‌ಡಿಆರ್‌ಎಫ್‌ನ ಒಂದು ತಂಡದಲ್ಲಿ 40 ಸಿಬ್ಬಂದಿ ಇದ್ದು, ಮರಕತ್ತರಿಸುವ ಉಪಕರಣ, ಬೋಟ್‌ಗಳು, ತುರ್ತು ವೈದ್ಯಕೀಯ ಸಾಮಗ್ರಿ, ಇತರ ರಕ್ಷಣೆ ಮತ್ತು ಪರಿಹಾರ ಸಾಮಗ್ರಿ ಒಳಗೊಂಡಿರುತ್ತದೆ.

ಅಗ್ನೇಯ ಅರಬಿ ಸಮುದ್ರ ಮತ್ತು ಲಕ್ಷದ್ವೀಪ ಪ್ರದೇಶಗಳಲ್ಲಿ ಗುರುವಾರ ವಾಯುಭಾರ ಕುಸಿತ ಹೆಚ್ಚಾಗಿದೆ. ಶನಿವಾರದ ವೇಳೆಗೆ ಇದು ಮತ್ತಷ್ಟು ಹೆಚ್ಚಾಗಿ ಚಂಡಮಾರುತ ಪ್ರಬಲಗೊಳ್ಳುವ ಸಾಧ್ಯತೆ ಇದೆ. ಇದು ಉತ್ತರ, ವಾಯವ್ಯ ಗುಜರಾತ್ ಮತ್ತು ಪಾಕಿಸ್ತಾನ ಕರಾವಳಿ ಕಡೆ ಚಲಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಚಂಡಮಾರುತವು ಮೇ 18ರ ಸಂಜೆ ಗುಜರಾತ್ ಕರಾವಳಿ ತಲುಪಬಹುದು ಎಂದೂ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.