ಪ್ರಯಾಗರಾಜ್: ಜಾತ್ಯತೀತತೆಯ ‘ರಾಜಕೀಯ ದುರುಪಯೋಗ’ದ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯಬೇಕಾದ ಅಗತ್ಯವಿದೆ ಎಂದು ಕೇಂದ್ರದ ಮಾಜಿ ಸಚಿವ, ಬಿಜೆಪಿ ನಾಯಕ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು.
ಸಂವಿಧಾನದ ಮೂಲ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಎಂಬ ಪದಗಳು ಇರಲಿಲ್ಲ. ಆದರೂ ಭಾರತ ಯಾವಾಗಲೂ ಜಾತ್ಯತೀತ ಮತ್ತು ಸಮಾಜವಾದಿ ರಾಷ್ಟ್ರವಾಗಿಯೇ ಉಳಿದುಕೊಂಡಿದೆ ಎಂದರು.
ಮೊಹರಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾನುವಾರ ಪ್ರಯಾಗರಾಜ್‌ನ ತಮ್ಮ ಹುಟ್ಟೂರಿಗೆ ಬಂದಿದ್ದ ಅವರು, ‘ಸ್ವಾತಂತ್ರ್ಯದ ನಂತರ ಪಾಕಿಸ್ತಾನವು ಇಸ್ಲಾಮಿಕ್ ಧ್ವಜವನ್ನು ಹಾರಿಸಿತು. ಆದರೆ ಭಾರತ ‘ಸರ್ವ ಧರ್ಮ ಸಮಭಾವ’ದ ಮಾರ್ಗವನ್ನು ಆಯ್ಕೆ ಮಾಡಿಕೊಂಡಿತು. ಇದು ನಮ್ಮ ದೇಶದ ಬಹುಸಂಖ್ಯಾತ ಸಮುದಾಯದ ಮೌಲ್ಯಗಳು, ಸಂಸ್ಕೃತಿ ಮತ್ತು ಚಿಂತನೆಗೆ ಪುರಾವೆಯಾಗಿದೆ’ ಎಂದು ತಿಳಿಸಿದರು.
‘1976ರ ತುರ್ತು ಪರಿಸ್ಥಿತಿಯ ಸಮಯದಲ್ಲಿ, ಜಾತ್ಯತೀತತೆ ಮತ್ತು ಸಮಾಜವಾದ ಪದಗಳನ್ನು ಸೇರಿಸುವ ಮೂಲಕ ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ಉಂಟುಮಾಡಲಾಯಿತು. ಇದರ ಹಿಂದೆ ರಾಜಕೀಯ ಸ್ವಾರ್ಥವಿತ್ತು’ ಎಂದು ಆರೋಪಿಸಿದರು. ‘ಜಾತ್ಯತೀತತೆಯನ್ನು ರಾಜಕೀಯವಾಗಿ ದುರುಪಯೋಗದಪಡಿಸಲಾಗಿದ್ದು, ಈ ಬಗ್ಗೆ ಚರ್ಚೆ ನಡೆಯಬೇಕು’ ಎಂದರು.
ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವುದಕ್ಕೆ ಪಾಕಿಸ್ತಾನದ ವಿರುದ್ಧ ಹರಿಹಾಯ್ದ ಅವರು, ತಾನು ಪೋಷಿಸುತ್ತಿರುವ ಭಯೋತ್ಪಾದಕರು ಇಸ್ಲಾಮ್‌ನ ತತ್ವಗಳಿಗೆ ಮತ್ತು ತನ್ನದೇ ದೇಶಕ್ಕೆ ದುರಂತವಾಗಿ ಪರಿಗಣಿಸಿದೆ ಎಂಬುದು ಪಾಕಿಸ್ತಾನಕ್ಕೆ ಮನವರಿಕೆಯಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.