ಕೋಟಾ(ರಾಜಸ್ತಾನ): ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಆಕಾಂಕ್ಷಿಯಾಗಿದ್ದ 18 ವರ್ಷದ ವಿದ್ಯಾರ್ಥಿನಿಯೊಬ್ಬಳು ಇಲ್ಲಿನ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಶರಣಾದ ವಿದ್ಯಾರ್ಥಿನಿ ಜೀಶನ್ ಜಮ್ಮು ಮತ್ತು ಕಾಶ್ಮೀರದ ನಿವಾಸಿಯಾಗಿದ್ದು, ಕೋಟಾದ ಕೋಚಿಂಗ್ ಸಂಸ್ಥೆಯೊಂದರಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದರು. ಇಲ್ಲಿನ ಪ್ರತಾಪ್ ಚೌರಾಹಾದಲ್ಲಿರುವ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದರು.
‘ಆತ್ಮಹತ್ಯೆಗೆ ಶರಣಾಗುವ ಮುನ್ನ ತನ್ನ ಸಂಬಂಧಿ ಬುರ್ಹಾನ್ ಎಂಬುವವರಿಗೆ ಕರೆ ಮಾಡಿದ್ದ ಜೀಶನ್, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಳು’ ಎಂದು ಮಹಾವೀರ್ ನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ಕಾವ್ಯಾ ತಿಳಿಸಿದ್ದಾರೆ.
ಬುರ್ಹಾನ್ ಅವರು ಅದೇ ಪಿಜಿಯಲ್ಲಿದ್ದ ಮತ್ತೊಬ್ಬ ವಿದ್ಯಾರ್ಥಿನಿ ಮಮತಾಗೆ ಕರೆ ಮಾಡಿ ಜೀಶನ್ ಕೋಣೆಗೆ ತೆರಳುವಂತೆ ಹೇಳಿದ್ದಾರೆ. ಮಮತಾ ಅವರು ಜೀಶನ್ ಕೋಣೆಗೆ ಹೋದಾಗ ಒಳಗಿನಿಂದ ಚಿಲಕ ಹಾಕಿರುವುದನ್ನು ಗಮನಿಸಿದ್ದಾರೆ. ತಕ್ಷಣ ಸಹಾಯಕ್ಕಾಗಿ ಕೂಗಿದ್ದಾರೆ.
ಅಷ್ಟರಲ್ಲೇ ಜೀಶನ್ ನೇಣು ಬಿಗಿದುಕೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ.
ಕೋಟಾದಲ್ಲಿ ಈ ವರ್ಷದ ಜನವರಿಯಿಂದ ಈವರಗೆ 15 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ತಿಂಗಳಲ್ಲಿ ಇದು ಎರಡನೇ ಪ್ರಕರಣವಾಗಿದ್ದು, ಮೇ 3ರಂದು ಮಧ್ಯಪ್ರದೇಶದಿಂದ ಬಂದಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.