ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪ್ರಧಾನಮಂತ್ರಿಗಳ ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿಯ (ಪಿಎಂಎಂಎಲ್) 47ನೇ ವಾರ್ಷಿಕ ಸಭೆಯಲ್ಲಿ, ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರೂ ಅವರ ಖಾಸಗಿ ದಾಖಲೆಗಳ ವಿಷಯವೂ ಚರ್ಚೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ತೀನ್‌ಮೂರ್ತಿ ಭವನ್‌ನಲ್ಲಿ ಸಭೆ ನಡೆದಿದ್ದು, ಈ ಸಭೆಯಲ್ಲಿ ಇದು ಒಳಗೊಂಡು ಅನೇಕ ಅಂಶಗಳು ಚರ್ಚೆಯಾದವು ಎಂದು ತಿಳಿಸಿವೆ. ಆದರೆ, ಚರ್ಚೆಯ ವಿವರಗಳು ಗೊತ್ತಾಗಿಲ್ಲ. ಒಂದು ಮೂಲದ ಪ್ರಕಾರ, ಸದಸ್ಯರೊಬ್ಬರು ಸಭೆಯಲ್ಲಿ ಈ ವಿಷಯ ಕುರಿತು ಗಮನಸೆಳೆದಿದ್ದಾರೆ.
ಕೇಂದ್ರ ದೆಹಲಿಯಲ್ಲಿರುವ ತೀನ್‌ಮೂರ್ತಿ ಭವನದಲ್ಲಿಯೇ ನೆಹರೂ ವಾಸವಿದ್ದು, ಅವರ ನಿಧನದ ನಂತರ ನೆಹರೂ ಸ್ಮಾರಕ ಸಂಗ್ರಹಾಲಯ ಮತ್ತು ಗ್ರಂಥಾಲಯವಾಗಿ ಪರಿವರ್ತಿಸಲಾಗಿತ್ತು. ವ್ಯಾಪಕ ಪುಸ್ತಕಗಳು ಮತ್ತು ಅಪರೂಪದ ದಾಖಲೆಗಳು ಇಲ್ಲಿವೆ. ಆಗಸ್ಟ್ 2023ರಿಂದ ಜಾರಿಗೆ ಬರುವಂತೆ ಇದರ ಹೆಸನ್ನು ಪ್ರಧಾನಮಂತ್ರಿಗಳ ಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಎಂದು ಮರುನಾಮಕರಣ ಮಾಡಲಾಗಿತ್ತು.
ಗುಜರಾತ್ ಮೂಲದ ಇತಿಹಾಸ ಬೋಧಕ, 56 ವರ್ಷದ ರಿಜ್ವಾನ್ ಖಾದ್ರಿ ಅವರು ಈ ಹಿಂದೆ ಸೆಪ್ಟೆಂಬರ್ ನಡೆದಿದ್ದ ಸಭೆಯಲ್ಲಿ, ಸೋನಿಯಾಗಾಂಧಿ ಅವರು ಹಲವು ವರ್ಷಗಳ ಹಿಂದೆ ಒಯ್ದಿದ್ದ ಹಲವು ದಾಖಲೆಗಳ ಬಗ್ಗೆ ಗಮನಸೆಳೆದಿದ್ದಾಗಿ ತಿಳಿಸಿದ್ದರು.
ಸೊಸೈಟಿ ಸದಸ್ಯರೂ ಆಗಿರುವ ಖಾದ್ರಿ ಅವರು, ‘ಈ ಹಿಂದೆ ನೆಹರೂ ಅವರಿಗೆ ಸೇರಿದ್ದು ಎನ್ನಲಾದ ಅನೇಕ ದಾಖಲೆಗಳನ್ನು ಸೋನಿಯಾಗಾಂಧಿ ಅವರು ‘51 ಬಾಕ್ಸ್’ಗಳಲ್ಲಿ ಒಯ್ದಿದ್ದರು’ ಎಂದೂ ತಿಳಿಸಿದ್ದರು.
ಅಲ್ಲದೆ, ಸೆಪ್ಟೆಂಬರ್ 9, 2024ರಲ್ಲಿ ಸೋನಿಯಾಗಾಂಧಿ ಅವರಿಗೆ ಪತ್ರವನ್ನು ಬರೆದಿದ್ದು, ನಿಮ್ಮ ಸುಪರ್ದಿಯಲ್ಲಿರುವ ನೆಹರೂ ಅವರಿಗೆ ಸೇರಿದ್ದ ಖಾಸಗಿ ದಾಖಲೆಗಳನ್ನು ಭೌತಿಕವಾಗಿ ಪರಿಶೀಲಿಸಲು, ಡಿಜಿಟಲ್ ಸ್ವರೂಪದಲ್ಲಿ ದಾಖಲೆ ಪಡೆಯಲು ಅವಕಾಶ ಕಲ್ಪಿಸಿ ಎಂದು ಕೋರಿದ್ದರು.
ಪ್ರಧಾನಮಂತ್ರಿ ಈ ಸೊಸೈಟಿಯ ಅಧ್ಯಕ್ಷರಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಉಪಾಧ್ಯಕ್ಷರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.