
ಬೆಂಗಳೂರು: ‘ದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ನಮ್ಮ ಕಂಪನಿಯ ಸಾಧನಗಳು ಕಳವಾಗಿವೆ’ ಎಂದು ನಿಯೋಸೇಪಿಯನ್ ಕಂಪನಿಯ ಸಹ-ಸಂಸ್ಥಾಪಕ, ಸಿಇಒ ಧನಂಜಯ್ ಯಾದವ್ ಹೇಳಿದ್ದಾರೆ.
ಈ ಬಗ್ಗೆ ಬೇಸರ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ಎಐ ಶೃಂಗದ ಮೊದಲ ದಿನವೇ ನಮಗೆ ಆಘಾತವಾಗಿದೆ’ ಎಂದು ಹೇಳಿದ್ದಾರೆ.
‘ಇದೇ ಮೊದಲ ಬಾರಿಗೆ ಭಾರತದಲ್ಲಿ ಎಐ ಶೃಂಗವನ್ನು ಆಯೋಜಿಸಲಾಗಿದ್ದು, ಇದರಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೆ. ಆದರೆ, ಮುಂದೆ ನಡೆದದ್ದು ಮಾತ್ರ ಆಘಾತಕಾರಿಯಾಗಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
‘ಮಧ್ಯಾಹ್ನ 2 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಕ್ಕೆ ಆಗಮಿಸುವುದರಿಂದ 12 ಗಂಟೆಯ ಸುಮಾರಿಗೆ ಸ್ಥಳದಲ್ಲಿ ಸ್ಪಚ್ಛಗೊಳಿಸುವ ಕೆಲಸಗಳು ಆರಂಭವಾದವು. ಆ ವೇಳೆ ಅಲ್ಲಿದ್ದವರನ್ನು ಹೊರಗೆ ಹೋಗುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದ್ದರು’
‘ಭಾರತದಲ್ಲಿ ಮೊಟ್ಟ ಮೊದಲ ಬಾರಿ ಪೇಟೆಂಟ್ ಹೊಂದಿದ ಧರಿಸಬಹುದಾದ ಎಐ ಸಾಧನಗಳನ್ನು ನಾವು ತಯಾರಿಸಿದ್ದು, ಪ್ರಧಾನಿ ಮೋದಿ ಅವರಿಗೆ ಅದರ ಬಗ್ಗೆ ವಿವರಿಸಬೇಕು. ಆದ್ದರಿಂದ ಇಲ್ಲಿ ಇರಲು ಅವಕಾಶ ಮಾಡಿಕೊಡುವಂತೆ ಭದ್ರತಾ ಅಧಿಕಾರಿಯೊಬ್ಬರಿಗೆ ಮನವಿ ಮಾಡಿದೆ. ಅದಕ್ಕೆ ಅವರು ಒಪ್ಪಿಕೊಂಡಿದ್ದರು. ಆದರೆ, ನಂತರ ಬಂದ ಮತ್ತೊಂದು ಗುಂಪು ನನಗೆ ಹೊರಗೆ ಹೋಗಲು ಹೇಳಿತು. ಭದ್ರತಾ ತಂಡಗಳ ನಡುವೆ ಸಮನ್ವಯದ ಕೊರತೆ ಕಾಣುತ್ತಿತ್ತು’ ಎಂದು ಯಾದವ್ ವಿವರಿಸಿದ್ದಾರೆ.
ಆಗ, ‘ಸಾಧನಗಳನ್ನು ನಮ್ಮೊಂದಿಗೆ ತೆಗೆದುಕೊಂಡು ಹೋಗಬೇಕೇ?’ ಎಂದು ನಾನು ಅವರಲ್ಲಿ ಕೇಳಿದೆ. ಅದಕ್ಕೆ, ಇತರರು ಲ್ಯಾಪ್‌ಟಾಪ್‌ಗಳನ್ನು ಸ್ಥಳದಲ್ಲಿಯೇ ಬಿಟ್ಟು ಹೋಗಿದ್ದಾರೆ. ನಿಮ್ಮ ವಸ್ತುಗಳನ್ನು ಭದ್ರತಾ ಸಿಬ್ಬಂದಿ ನೋಡಿಕೊಳ್ಳುತ್ತಾರೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಅವರ ಮೇಲೆ ನಂಬಿಕೆಯಿಟ್ಟು ನಾವು ಹೊರನಡೆದೆವು.
ಮಧ್ಯಾಹ್ನ 12ರಿಂದ 6 ರವರೆಗೆ ಗೇಟ್‌ಗಳನ್ನು ಮುಚ್ಚಲಾಗಿತ್ತು. ಇದು ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಸಮಯವಾಗಿತ್ತು. ಒಳಗೆ ಬಂದು ನೋಡಿದರೆ ನಮ್ಮ ವಸ್ತುಗಳು ಕಳವಾಗಿದ್ದವು!
‘ಭದ್ರತೆಯ ನಡುವೆಯೇ ನಮ್ಮ ವಸ್ತುಗಳು ಕಾಣೆಯಾಗುವುದನ್ನು ನೋಡಲು ಇಷ್ಟೆಲ್ಲಾ ಪಾವತಿಸಿ ಇಲ್ಲಿಗೆ ಬಂದೆವು’ ಎಂದು ಯಾದವ್ ಬೇಸರ ಹೊರ ಹಾಕಿದ್ದಾರೆ.
‘ಭದ್ರತಾ ಸಿಬ್ಬಂದಿ ಮತ್ತು ಅಧಿಕೃತ ಜನರಿಗೆ ಮಾತ್ರ ಪ್ರವೇಶವಿದ್ದರೆ, ಕಳ್ಳತನವಾಗಲು ಹೇಗೆ ಸಾಧ್ಯ? ಇದು ಅತ್ಯಂತ ನಿರಾಶಾದಾಯಕವಾಗಿದೆ’ ಎಂದಿದ್ದಾರೆ.
ನಿಯೋಸೇಪಿಯನ್, ಧರಿಸಬಹುದಾದ ಎಐ ಸಾಧನಗಳನ್ನು ತಯಾರಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.