ನೇಪಾಳದ ಕಠ್ಮಂಡು ನಗರದಲ್ಲಿ ಭದ್ರತೆಗೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ
ಎಎಫ್‌ಪಿ ಚಿತ್ರ
ಹೈದರಾಬಾದ್: ಭಾರತದಿಂದ ನೇಪಾಳಕ್ಕೆ ಭೇಟಿ ನೀಡಿ ಆಂಧ್ರಪ್ರದೇಶಕ್ಕೆ ಮರಳಿದ ಪ್ರವಾಸಿಗರು ಅಲ್ಲಿನ ಹಿಂಸಾಚಾರದ ಕುರಿತ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.
ವಿಶಾಖಪಟ್ಟಣದಿಂದ ನೇಪಾಳಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ 10 ಮಂದಿ ಅಲ್ಲಿನ ಮುಕ್ತಿನಾಥ ದೇವಾಲಯಕ್ಕೆ ಭೇಟಿ ನೀಡುವ ಮುನ್ನ ಪೋಖರಾದ ಹೋಟೆಲ್‌ನಲ್ಲಿ ಲಗೇಜ್‌ಗಳನ್ನು ಇರಿಸಿದ್ದರು. ದೇವಸ್ಥಾನದಿಂದ ಮರಳುವ ವೇಳೆಗೆ, ಹೋಟೆಲ್ ಅನ್ನು ಸ್ಥಳೀಯ ಗುಂಪೊಂದು ಸುಟ್ಟುಹಾಕಿತ್ತು. ಅದರೊಳಗಿದ್ದ ಪ್ರವಾಸಿಗರ ಲಗೇಜ್‌ಗಳು ಸುಟ್ಟು ಹೋಗಿದ್ದವು. ಬೇರೆಡೆ ಹೋಗಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಅವರಿಗೆ ನೇಪಾಳಿ ಚಾಲಕರು ಸಹಾಯಕ್ಕೆ ಧಾವಿಸಿದ್ದು, ಆಕ್ರಮಣಕಾರರಿಂದ ರಕ್ಷಿಸಿದರು.
‘ನಾವೆಲ್ಲಾ ಸಣ್ಣ ವಾಹನದಲ್ಲಿ ನಾಲ್ಕು ಗಂಟೆಗಳವರೆಗೆ ಸಿಕ್ಕಿಕೊಂಡಿದ್ದೆವು. ಕ್ಷಣಕ್ಷಣಕ್ಕೂ ನಮ್ಮ ಹೃದಯ ಬಡಿತ ಹೆಚ್ಚಾಗುತ್ತಿತ್ತು. ವಾಹನದ ಕಿಟಕಿಯ ಗಾಜುಗಳನ್ನು ಇಳಿಸುವಂತೆ ಗುಂಪೊಂದು ಒತ್ತಾಯಿಸಿತ್ತು. ಆ ಸಂದರ್ಭದಲ್ಲಿ, ಅವರು ನಮ್ಮ ಮೇಲೆ ದಾಳಿ ನಡೆಸುತ್ತಾರೆ ಎಂದೇ ಭಾವಿಸಿದ್ದೆವು. ಭಾರತದಿಂದ ಬಂದಿರುವ ಪ್ರವಾಸಿಗರು ಎಂದು ನೇಪಾಳಿ ಚಾಲಕರು ಮನವರಿಕೆ ಮಾಡಲು ಪ್ರಯತ್ನಿಸಿದರು. ನಮ್ಮ ಗುಂಪಿನ ಮಹಿಳೆಯರನ್ನು ನೋಡಿದ ಬಳಿಕ ಆಕ್ರಮಣಕಾರರು ಅಲ್ಲಿಂದ ಹೊರಟರು. ಅವರು ತಮ್ಮ ಗುರುತು ಸಿಗದಂತೆ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಂಡಿದ್ದರು. ಕೊನೆಗೂ ನಾವು ಸುರಕ್ಷಿತವಾಗಿ ಬಂದೆವು’ ಎಂದು ಎಲ್‌ಐಸಿ ಉದ್ಯೋಗಿ ಲಕ್ಷ್ಮಿ ನಿಟ್ಟುಸಿರು ಬಿಟ್ಟಿದ್ದಾರೆ.
ಗುರುವಾರ ನೇಪಾಳದಿಂದ ವಿಶಾಖಪಟ್ಟಣಕ್ಕೆ ಮರಳಿದ 150 ಪ್ರಯಾಣಿಕರಲ್ಲಿ ಲಕ್ಷ್ಮಿ ಅವರೂ ಒಬ್ಬರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.