ADVERTISEMENT

ಮುಖರ್ಜಿ ಆಯೋಗದ ವರದಿಯ ‘ವಿಶ್ವಾಸಾರ್ಹತೆ’ ಪ್ರಶ್ನಿಸಿದ ನೇತಾಜಿ ಕುಟುಂಬ ಸದಸ್ಯರು

ತಕ್ಷಣದಲ್ಲೇ ಚಿತಾಭಸ್ಮದ ಡಿಎನ್‌ಎ ಪರೀಕ್ಷೆ ನಡೆಸಲು ಆಗ್ರಹ

ಪಿಟಿಐ
Published 26 ಆಗಸ್ಟ್ 2020, 11:59 IST
Last Updated 26 ಆಗಸ್ಟ್ 2020, 11:59 IST
ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ‌(ಸಂಗ್ರಹ ಚಿತ್ರ)
ಮಹಾತ್ಮ ಗಾಂಧಿ ಮತ್ತು ಸುಭಾಷ್ ಚಂದ್ರ ಬೋಸ್ ‌(ಸಂಗ್ರಹ ಚಿತ್ರ)   

ಕೋಲ್ಕತ್ತ: ನ್ಯಾಯಮೂರ್ತಿ ಮುಖರ್ಜಿ ಆಯೋಗದ ವರದಿಯ ‘ವಿಶ್ವಾಸಾರ್ಹತೆ’ಯನ್ನು ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರ ಕುಟುಂಬದ ಇಬ್ಬರು ಸದಸ್ಯರು ಪ್ರಶ್ನಿಸಿದ್ದಾರೆ.

ಯಾವುದೇ ಕಾರಣ ಅಥವಾ ಸಂದರ್ಭದ ಮಾಹಿತಿ ನೀಡದೇ ಈ ವರದಿಯು, ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರ ಬಿಂದು ಆಗಿದ್ದ ನೇತಾಜಿ ಅವರ ಸಾವನ್ನು ಘೋಷಿಸಿದೆ ಎಂದು ಸದಸ್ಯರು ಉಲ್ಲೇಖಿಸಿದ್ದಾರೆ.

ಈ ಕುರಿತು ಆಗಸ್ಟ್‌ 24ರಂದು ಬಹಿರಂಗ ಪತ್ರ ಬರೆದಿರುವ ನೇತಾಜಿ ಅವರ ಮೊಮ್ಮಗ ಸೂರ್ಯ ಬೋಸ್‌ ಮತ್ತು ಮೊಮ್ಮಗಳು ಮಾಧುರಿ ಬೋಸ್‌, ‘ನೇತಾಜಿ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಹಾಗೂ ಟೋಕಿಯೊದಲ್ಲಿ ಇರುವ ರೆಂಕೋಜಿ ದೇವಸ್ಥಾನದಲ್ಲಿ ಇದ್ದ ಚಿತಾಭಸ್ಮ ನೇತಾಜಿ ಅವರದ್ದಲ್ಲ ಎಂದು ನ್ಯಾಯಮೂರ್ತಿ ಮನೋಜ್‌ ಕುಮಾರ್‌ ಮುಖರ್ಜಿ ಅವರು 2005ರ ನವೆಂಬರ್‌ 8ರ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. 1999ರಲ್ಲಿ ನಿಯೋಜಿಸಲ್ಪಟ್ಟಿದ್ದ ಈ ಆಯೋಗವು, ನೇತಾಜಿ ಅವರು ಹೇಗೆ, ಎಲ್ಲಿ, ಯಾವ ಕಾರಣದಿಂದ ಮೃತಪಟ್ಟರು? ಎಂಬ ಯಾವ ಮಾಹಿತಿಯನ್ನೂ ವರದಿಯಲ್ಲಿ ನೀಡಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಅವರು ಮೃತಪಟ್ಟಿದ್ದಾರೆ’ ಎಂದಷ್ಟೇ ನ್ಯಾಯಮೂರ್ತಿ ಮುಖರ್ಜಿ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ತೈವಾನ್‌ನಲ್ಲಿ ಯಾವುದೇ ವಿಮಾನ ಅಪಘಾತ ನಡೆದಿಲ್ಲ ಹಾಗೂ ಅದರಲ್ಲಿ ನೇತಾಜಿ ಅವರು ಮೃತಪಟ್ಟಿಲ್ಲ ಎನ್ನುವ ಕುರಿತು ಮುಖರ್ಜಿ ಅವರು ನೀಡಿರುವ ಸಾಕ್ಷ್ಯ ಹಾಗೂ ಪ್ರಮುಖ ತರ್ಕಗಳು ಯಾವುದೇ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ’ ಎಂದು ಆರೋಪಿಸಲಾಗಿದೆ.

1945ರ ಆಗಸ್ಟ್‌ 18ರಂದು ತೈವಾನ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನೇತಾಜಿ ಅವರು ಮೃತಪಟ್ಟಿದ್ದಾರೆ ಎಂದು ಜಪಾನ್‌ ಸರ್ಕಾರ ಅಧಿಕೃತವಾಗಿ ಘೋಷಿಸಿ 75 ವರ್ಷ ಕಳೆದಿದ್ದರೂ, ವಾಸ್ತವದಲ್ಲಿ ನಡೆದಿದ್ದೇನು ಎನ್ನುವುದು ಇಂದಿಗೂ ಹಲವರ ಮನಸ್ಸಿನಲ್ಲಿ ಸಂಶಯವಾಗಿಯೇ ಉಳಿದಿದೆ ಎಂದು ಕುಟುಂಬದ ಸದಸ್ಯರು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಡಿಎನ್‌ಎ ಪರೀಕ್ಷೆ ನಡೆಸಿ:ರೆಂಕೋಜಿ ದೇವಸ್ಥಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಪೂರ್ಣ ಸಹಕಾರದ ಭರವಸೆ ನೀಡಿದ್ದರೂ, ಅಲ್ಲಿ ದೊರಕಿದ್ದ ಚಿತಾಭಸ್ಮದ ಡಿಎನ್‌ಎ ಪರೀಕ್ಷೆಯನ್ನು ಆಯೋಗವು ನಡೆಸಿಲ್ಲ. ಕಳೆದ 15 ವರ್ಷದಿಂದ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಹೊಸ ತಂತ್ರಜ್ಞಾನಗಳು ಬಂದಿದ್ದು, ತಕ್ಷಣದಲ್ಲೇ ಚಿತಾಭಸ್ಮದ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.