ADVERTISEMENT

ದೇಶದಲ್ಲಿ ಕೋವಿಡ್‌ ಹೊಸ ವೈರಾಣು ಪತ್ತೆ; 8ಕ್ಕೇರಿದ ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 19:30 IST
Last Updated 9 ಜನವರಿ 2023, 19:30 IST
   

ನವದೆಹಲಿ: ಅಮೆರಿಕದಲ್ಲಿ ಕೋವಿಡ್‌ ಉಲ್ಬಣಕ್ಕೆ ಕಾರಣವಾದ ಕೋವಿಡ್‌–19ರ ರೂಪಾಂತರಿ ಎಕ್ಸ್‌ಬಿಬಿ 1.5 ತಳಿಯ ಮತ್ತೊಂದು ಹೊಸ ಪ್ರಕರಣ ಸೋಮವಾರ ಭಾರತದಲ್ಲಿ ಪತ್ತೆಯಾಗಿದ್ದು, ಇನ್‌ಸ್ಯಾಕೋಗ್‌ (ಐಎನ್‌ಎಸ್‌ಎಸಿಒಜಿ) ದತ್ತಾಂಶದ ಪ್ರಕಾರ ಇಂತಹ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಒಟ್ಟಾರೆ ಎಂಟಕ್ಕೆ ಏರಿದೆ.

ಕಳೆದ 24 ಗಂಟೆಗಳಲ್ಲಿ ಉತ್ತರಾಖಂಡದಲ್ಲಿ ಈ ಹೊಸ ಪ್ರಕರಣ ಪತ್ತೆಯಾಗಿದೆ. ಆದರೆ, ಇದಕ್ಕೂ ಮೊದಲು ಗುಜರಾತ್‌ನಲ್ಲಿ ಮೂರು ಪ್ರಕರಣಗಳು ಕಂಡುಬಂದವು. ಕರ್ನಾಟಕ, ತೆಲಂಗಾಣ, ಛತ್ತೀಸಗಢ ಮತ್ತು ರಾಜಸ್ಥಾನದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾಗಿವೆ ಎಂದು ಭಾರತೀಯ ಕೋವಿಡ್‌ ವೈರಾಣು ಸಂರಚನಾ ವಿಶ್ಲೇಷಣಾ ಘಟಕ (ಐಎನ್‌ಎಸ್‌ಎಸಿಒಜಿ) ಹೇಳಿದೆ.

ಎಕ್ಸ್ ಬಿಬಿ.1.5 ವೈರಾಣು ಓಮೈಕ್ರಾನ್ ಎಕ್ಸ್‌ಬಿಬಿಯ ರೂಪಾಂತರಿ. ಇದು ಓಮೈಕ್ರಾನ್ ಬಿಎ 2.10.1 ಮತ್ತು ಬಿಎ.2.75 ಉಪ ತಳಿಗಳಿಂದ ಮರುಸಂಯೋಜಿತವಾಗಿದೆ. ಅಮೆರಿಕದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಎಕ್ಸ್‌ಬಿಬಿ ಮತ್ತು ಎಕ್ಸ್‌ಬಿಬಿ.1.5 ಸಂಯೋಜಿತ ಸೋಂಕಿನ ಪ್ರಕರಣಗಳು ಶೇ 44ರಷ್ಟು ಇವೆ.

ADVERTISEMENT

ಇನ್‌ಸ್ಯಾಕೋಗ್‌ ದತ್ತಾಂಶದ ಪ್ರಕಾರ, ಚೀನಾದಲ್ಲಿ ಉಲ್ಬಣಿಸಿರುವ ಓಮೈಕ್ರಾನ್‌ನ ಉಪತಳಿ ಬಿಎಫ್. 7 ಸೋಂಕಿನ ಒಂಬತ್ತು ಪ್ರಕರಣಗಳು ದೇಶದಲ್ಲಿ ಕಂಡುಬಂದಿವೆ. ನಾಲ್ಕು ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ, ಗುಜರಾತ್‌ ಮತ್ತು ಹರಿಯಾಣದಲ್ಲಿ ತಲಾ ಎರಡು ಹಾಗೂ ಒಡಿಶಾದಲ್ಲಿ ಒಂದು ಪ್ರಕರಣ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.