ADVERTISEMENT

ಭಾರತದ 38 ಜನರಲ್ಲಿ ರೂಪಾಂತರಿ ಕೊರೊನಾ ವೈರಸ್‌ ಸೋಂಕು ಪತ್ತೆ

ಪಿಟಿಐ
Published 4 ಜನವರಿ 2021, 14:58 IST
Last Updated 4 ಜನವರಿ 2021, 14:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ರೂಪಾಂತರಗೊಂಡ ಕೊರೊನಾ ವೈರಾಣು, ಭಾರತದಲ್ಲಿ ಇಲ್ಲಿಯವರೆಗೂ 38 ಜನರಲ್ಲಿ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯವು ಸೋಮವಾರ ತಿಳಿಸಿದೆ.

ಶುಕ್ರವಾರದವರೆಗೆ 29 ಜನರಲ್ಲಿ ಈ ವೈರಾಣು ಇರುವುದು ಖಚಿತವಾಗಿತ್ತು. ಆಯಾ ರಾಜ್ಯ ಸರ್ಕಾರಗಳು ಈ ವೈರಾಣು ಇರುವ ಸೋಂಕಿತರನ್ನು ನಿಗದಿತ ಆರೋಗ್ಯಸೇವಾ ಘಟಕಗಳ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿದ್ದು, ಸೋಂಕಿತರ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಸಚಿವಾಲಯವು ಮಾಹಿತಿ ನೀಡಿದೆ.

‘ಸೋಂಕಿತರ ಜೊತೆ ಪ್ರಯಾಣಿಸಿದವರು ಹಾಗೂ ಅವರ ಜೊತೆಗೆ ಸಂಪರ್ಕದಲ್ಲಿದ್ದವರ ಪತ್ತೆಕಾರ್ಯಕ್ಕೆ ಚುರುಕು ನೀಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ. ಸೋಂಕಿತರ ಪತ್ತೆ, ಕಂಟೈನ್‌ಮೆಂಟ್‌, ಪರೀಕ್ಷೆ ಹಾಗೂ ಮಾದರಿಗಳ ಸಂಗ್ರಹ ಹಾಗೂ ರವಾನೆಯ ಕುರಿತು ರಾಜ್ಯ ಸರ್ಕಾರಗಳಿಗೆ ಸಲಹೆಗಳನ್ನು ನಿರಂತರವಾಗಿ ನೀಡಲಾಗುತ್ತಿದೆ. ಡೆನ್ಮಾರ್ಕ್‌, ನೆದರ್‌ಲ್ಯಾಂಡ್‌, ಆಸ್ಟ್ರೇಲಿಯಾ, ಇಟಲಿ, ಸ್ವೀಡನ್‌, ಫ್ರಾನ್ಸ್‌, ಸ್ಪೇನ್‌, ಜರ್ಮನಿ, ಜಪಾನ್‌ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ರೂಪಾಂತರಗೊಂಡ ವೈರಾಣು ಪತ್ತೆಯಾಗಿದೆ’ ಎಂದು ತಿಳಿಸಿದೆ.

ADVERTISEMENT

ಡಿ.9ರಿಂದ ಡಿ.22ರವರೆಗೆ ಭಾರತಕ್ಕೆ ಆಗಮಿಸಿದವರಲ್ಲಿ, ಸೋಂಕಿನ ಲಕ್ಷಣವಿರುವವರಿಗೆ ಹಾಗೂ ಸೋಂಕು ದೃಢಪಟ್ಟವರನ್ನು ಮತ್ತೆ ಪರೀಕ್ಷೆಗೆ ಒಳಪಡಿಸಿ, ರೂಪಾಂತರಗೊಂಡ ವೈರಾಣು ಇದೆಯೇ ಎನ್ನುವುದನ್ನು ಪತ್ತೆಹಚ್ಚುವ ಕಾರ್ಯ ಮಾಡಲಾಗುತ್ತಿದೆ ಎಂದು ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.