ADVERTISEMENT

ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಹೊಸ ಕ್ರಿಮಿನಲ್‌ ಕಾನೂನುಗಳು

ಪಿಟಿಐ
Published 24 ಫೆಬ್ರುವರಿ 2024, 11:17 IST
Last Updated 24 ಫೆಬ್ರುವರಿ 2024, 11:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಬ್ರಿಟಿಷರ ಕಾಲದ ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನಿನ ಬದಲಿಗೆ ರೂಪಿಸಲಾಗಿರುವ ಹೊಸ ಕಾನೂನು ಜುಲೈ 1ರಿಂದ ಜಾರಿಗೆ ಬರಲಿದೆ. ಭಾರತೀಯ ದಂಡ ಸಂಹಿತೆಯು (ಐಪಿಸಿ) ‘ಭಾರತೀಯ ನ್ಯಾಯ ಸಂಹಿತೆ’ಯಾಗಿ, ಅಪರಾಧ ಪ್ರಕ್ರಿಯಾ ಸಂಹಿತೆಯು ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯಾಗಿ ಮತ್ತು ಸಾಕ್ಷ್ಯ ಕಾಯ್ದೆಯು ‘ಭಾರತೀಯ ಸಾಕ್ಷ್ಯ ಕಾಯ್ದೆ’ಯಾಗಿ ಜಾರಿಗೆ ಬರಲಿವೆ.

ಈ ಸಂಬಂಧ ಗೃಹ ಸಚಿವಾಲಯವು ಶನಿವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಕಾನೂನು ಬದಲಿಗೆ ಸಂಬಂಧಿಸಿದ ಮೂರೂ ಮಸೂದೆಗಳಿಗೆ ಕಳೆದ ವರ್ಷ ಡಿಸೆಂಬರ್ 21ರಂದು ಸಂಸತ್ ಅನುಮೋದನೆ ನೀಡಿತ್ತು. ಡಿಸೆಂಬರ್ 25ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಕಿತ ಹಾಕಿದ್ದರು.

ADVERTISEMENT

‘ಕಾನೂನು ಬದಲಾವಣೆಯ ವೇಗಕ್ಕೆ ಹೊಂದಿಕೊಳ್ಳಲು ಪೊಲೀಸರಿಗೆ ಮತ್ತು ನ್ಯಾಯಾಂಗ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗುವುದು. ವಕೀಲರು ಕಾನೂನು ಬದಲಾವಣೆಗೆ ತಕ್ಕಂತೆ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಬೇಕು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ಕ್ರಿಮಿನಲ್ ಕಾನೂನು ದೇಶದ ಅಪರಾಧ ನ್ಯಾಯ ವ್ಯವಸ್ಥೆಯನ್ನು ವಸಾಹತು ಕಾಲದ ಜಡತ್ವದಿಂದ ಹೊರತಂದು ಸಂಪೂರ್ಣವಾಗಿ ನವೀಕರಿಸುತ್ತದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

‘ಶಿಕ್ಷೆ ನೀಡುವುದಕ್ಕಿಂತಲೂ ನ್ಯಾಯ ನೀಡುವುದು ನಮ್ಮ ಉದ್ದೇಶವಾಗಿದೆ. ಹೊಸ ಕಾನೂನಿನಲ್ಲಿ ಭಯೋತ್ಪಾದನೆಗೆ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ. ದೇಶದ್ರೋಹದ ಕಾನೂನನ್ನು ರದ್ದುಪಡಿಸಲಾಗಿದ್ದು, ‘ಸರ್ಕಾರದ ವಿರುದ್ಧದ ಅಪರಾಧಗಳು’ ಎನ್ನುವ ಹೊಸ ಸೆಕ್ಷನ್ ಅನ್ನು ಜಾರಿಗೆ ತರಲಾಗಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಪ್ರತ್ಯೇಕತೆಯ ಘೋಷಣೆ, ಸಶಸ್ತ್ರ ಪ್ರತಿರೋಧ, ವಿಧ್ವಂಸಕ ಚಟುವಟಿಕೆ, ಪ್ರತ್ಯೇಕತಾವಾದಿ ಚಟುವಟಿಕೆ ಅಥವಾ ಸಾರ್ವಭೌಮತೆಗೆ ಅಥವಾ ಏಕತೆಗೆ ಭಂಗ ತರುವುದನ್ನು ಅಪರಾಧ ಎಂದು ಭಾರತೀಯ ನ್ಯಾಯ ಸಂಹಿತೆಯು ವರ್ಗೀಕರಿಸಿದ್ದು, ದೇಶದ್ರೋಹ ಕುರಿತ ಕಾನೂನನ್ನು ಹೊಸ ಸ್ಪರೂಪದಲ್ಲಿ ಪರಿಚಯಿಸಿದೆ.

ಸದ್ಯ ಸೆಕ್ಷನ್ 106 (2) ಜಾರಿಯಿಲ್ಲ

ಟ್ರಕ್ ಮಾಲೀಕರ ಪ್ರತಿಭಟನೆಯ ಹಿನ್ನೆಲೆಯಲ್ಲಿ ‘ಹಿಟ್ ಆ್ಯಂಡ್ ರನ್’ ಪ್ರಕರಣಗಳಿಗೆ ಸಂಬಂಧಿಸಿದ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 106 (2) ಅನ್ನು ಜಾರಿಗೊಳಿಸುವ ನಿರ್ಣಯವನ್ನು ಮಾತ್ರ ಸದ್ಯ ತಡೆಹಿಡಿಯಲು ನಿರ್ಧರಿಸಲಾಗಿದೆ. ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿ ಸಾವಿಗೆ ಕಾರಣವಾಗುವುದರ ಜತೆಗೆ ಪರಾರಿಯಾಗುವ ಟ್ರಕ್ ಚಾಲಕರಿಗೆ 10 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಭಾರತೀಯ ನ್ಯಾಯ ಸಂಹಿತೆಯ 106 (2) ಸೆಕ್ಷನ್ ವಿರುದ್ಧ ಟ್ರಕ್ ಮಾಲೀಕರು ಮತ್ತು ಚಾಲಕರು ಪ್ರತಿಭಟನೆ ನಡೆಸಿದ್ದರು. ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ಅಜಯ್ ಭಲ್ಲಾ ಸೆಕ್ಷನ್ ಅವರು 106 (2) ಜಾರಿ ಸಂಬಂಧ ಅಖಿಲ ಭಾರತೀಯ ಮೋಟಾರ್ ಟ್ರಾನ್ಸ್‌ಪೋರ್ಟ್ ಕಾಂಗ್ರೆಸ್ ಅನ್ನು ಸಂಪರ್ಕಿಸಿದ ನಂತರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.