ADVERTISEMENT

ದೆಹಲಿ ರೈಲು ನಿಲ್ದಾಣ ಕಾಲ್ತುಳಿತ ಪ್ರಕರಣ: 33 ಸಂತ್ರಸ್ತ ಕುಟುಂಬಗಳಿಗೆ ₹2 ಕೋಟಿ

ಪಿಟಿಐ
Published 12 ಮಾರ್ಚ್ 2025, 13:23 IST
Last Updated 12 ಮಾರ್ಚ್ 2025, 13:23 IST
<div class="paragraphs"><p>ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ</p></div>

ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ

   

(ಪಿಟಿಐ ಚಿತ್ರ)

ನವದೆಹಲಿ: ನವದೆಹಲಿಯ ರೈಲು ನಿಲ್ದಾಣದಲ್ಲಿ ಫೆ. 15ರಂದು ಸಂಭವಿಸಿದ ಕಾಲ್ತುಳಿತ ಪ್ರಕರಣದ 33 ಸಂತ್ರಸ್ತ ಕುಟುಂಬಗಳಿಗೆ ಒಟ್ಟು ₹2.01 ಕೋಟಿಯನ್ನು ಹಂಚಲಾಗಿದೆ ಎಂದು ಲೋಕಸಭೆಗೆ ಸರ್ಕಾರ ಬುಧವಾರ ಮಾಹಿತಿ ನೀಡಿದೆ.

ADVERTISEMENT

ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾಹಿತಿ ನೀಡಿದ ರೈಲು ಸಚಿವ ಅಶ್ವಿನಿ ವೈಷ್ಣವ್‌, ‘ಕಾಲ್ತುಳಿತ ಪ್ರಕರಣದಲ್ಲಿ ಮೃತಪಟ್ಟ ವ್ಯಕ್ತಿಗಳ ಮಕ್ಕಳಿಗೆ ₹10 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹2.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ₹1 ಲಕ್ಷದಂತೆ ಪರಿಹಾರ ವಿತರಿಸಲಾಗಿದೆ’ ಎಂದಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿ ಜ. 13ರಿಂದ ಫೆ. 26ರವರೆಗೆ ಆಯೋಜಿಸಿದ್ದ ಮಹಾಕುಂಭ ಮೇಳಕ್ಕೆ ಹೊರಟವರಿಗಾಗಿ ರೈಲ್ವೆ ಇಲಾಖೆಯು ಫೆ. 15ರಂದು ಎರಡು ವಿಶೇಷ ರೈಲುಗಳನ್ನು ವ್ಯವಸ್ಥೆ ಮಾಡಿತ್ತು. ಆದರೆ ರೈಲುಗಳ ಆಗಮ ಕುರಿತು ನೀಡಿದ ಮಾಹಿತಿಯಲ್ಲಿ ಗೊಂದಲ ಉಂಟಾಗಿದ್ದರಿಂದ ನೂಕು ನುಗ್ಗಲು ಉಂಟಾಗಿತ್ತು ಎಂದೆನ್ನಲಾಯಿತು. 

ಘಟನೆಯಲ್ಲಿ ಒಟ್ಟು ಮೃತಪಟ್ಟವರು ಹಾಗೂ ಗಾಯಗೊಂಡವರ ಮಾಹಿತಿಯನ್ನು ಸಚಿವ ವೈಷ್ಣವ್‌್ ಹಂಚಿಕೊಂಡಿಲ್ಲ. ಆದರೆ ರೈಲ್ವೆ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯನ್ವಯ ಕಾಲ್ತುಳಿತ ಪ್ರಕರಣದಲ್ಲಿ 18 ಜನ ಮೃತಪಟ್ಟು 15 ಜನ ಗಾಯಗೊಂಡಿದ್ದಾರೆ ಎಂದು ಹೇಳಿತ್ತು.

‘ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದೆ. ₹5 ಸಾವಿರ ಕೋಟಿ ವೆಚ್ಚದಲ್ಲಿ ಪ್ರಯಾಗ್‌ರಾಜ್‌ ಪ್ರದೇಶದಲ್ಲಿ ಮೂಲಸೌಕರ್ಯ ಹೆಚ್ಚಳ, ಸಾಮರ್ಥ್ಯ ಹೆಚ್ಚಳದಂತ ಕಾಮಗಾರಿಗಳು ಪೂರ್ಣಗೊಂಡಿವೆ. ಮಹಾಕುಂಭ ಮೇಳದಲ್ಲಿ 17,300 ರೈಲುಗಳು ಸಂಚರಿಸಿದವು. 4.24 ಕೋಟಿ ಜನರು ರೈಲು ಮೂಲಕ ಪ್ರಯಾಣಿಸಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‘2019ರ ಕುಂಭ ಮೇಳದಲ್ಲಿ 694 ರೈಲುಗಳು ಸಂಚರಿಸಿದ್ದವು. ಈ ಬಾರಿ 3 ಸಾವಿರ ವಿಶೇಷ ರೈಲುಗಳನ್ನೂ ಒಳಗೊಂಡು 17,300 ರೈಲುಗಳು ಸಂಚರಿಸಿವೆ. ಅಯೋಧ್ಯಾ, ವಾರಾಣಸಿ ಮತ್ತು ಚಿತ್ರಕೂಟ ಒಳಗೊಂಡು ಇದೇ ಮೊದಲ ಬಾರಿಗೆ ರಿಂಗ್ ರೈಲ್ ಸೇವೆಯನ್ನು ಆರಂಭಿಸಲಾಗಿತ್ತು. ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಮೇಳದಲ್ಲಿ 22 ರೈಲುಗಳಿಗೆ ಹಾನಿಯಾಗಿದೆ’ ಎಂದು ಸಚಿವ ವೈಷ್ಣವ್ ಮಾಹಿತಿ ನೀಡಿದರು.

‘ಪ್ರಯಾಗ್‌ರಾಜ್‌ನ ರೈಲ್ವೆ ನಿಲ್ದಾಣದಲ್ಲಿ ಮಹತ್ತರ ಬದಲಾವಣೆ ತರುವ ನಿಟ್ಟಿನಲ್ಲಿ ಮೂಲಕಸೌರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ನೀರು, ಶೌಚಾಲಯ, ತಂಗುದಾಣ, ಆಶ್ರಯ ಕೇಂದ್ರ, ಸೇತುವೆಗಳ ನಿರ್ಮಾಣ ನಡೆದಿದೆ. ಗಾಲಿಕುರ್ಚಿ, ಸಾಮಾನು ಸರಂಜಾಮು ಸಾಗಿಸುವ ಟ್ರಾಲಿಗಳು, ಹೋಟೆಲ್, ಟ್ಯಾಕ್ಸಿ, ಮಕ್ಕಳಿಗೆ ಹಾಲುಣಿಸುವ ಕೇಂದ್ರ ಸೇರಿದಂತೆ ನಿಲ್ದಾಣದೊಳಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

‘ಟಿಕೆಟ್‌ ಸಾಮರ್ಥ್ಯವನ್ನು ಪ್ರತಿ ದಿನ 10 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ತಡೆರಹಿತ ಕಾರ್ಯಾಚರಣೆಗಾಗಿ ನಾಲ್ಕು ಹಂತಗಳಲ್ಲಿ ಬ್ಯಾಟರಿ ನೆರವು ಅಳವಡಿಸಲಾಗಿದೆ. ಆಸ್ಪತ್ರೆ, ಪ್ರಯಾಣಿಕರ ನೆರವಿಗಾಗಿ ರೈಲ್ವೆ ಉಚಿತ ಸಹಾಯವಾಣಿ ಸಂಖ್ಯೆ, ಯಾತ್ರಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ 12 ಭಾಷೆಗಳಲ್ಲಿ ಮಾಹಿತಿ ನೀಡುವ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದು ವೈಷ್ಣವ್ ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.