ADVERTISEMENT

ಬೆಂಗಳೂರು –ಪುಣೆ ನಡುವೆ ಹೊಸ ಹೆದ್ದಾರಿ: ನಿತಿನ್‌ ಗಡ್ಕರಿ

ಹೊಸ ಹೆದ್ದಾರಿ ಬಳಿಕ 76 ಕಿ.ಮೀ ತಗ್ಗಲಿರುವ ಪ್ರಯಾಣ ಅವಧಿ –ನಿತಿನ್‌ ಗಡ್ಕರಿ

ಪಿಟಿಐ
Published 28 ಮಾರ್ಚ್ 2022, 19:25 IST
Last Updated 28 ಮಾರ್ಚ್ 2022, 19:25 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ಪುಣೆ: ‘ಬೆಂಗಳೂರು ಮತ್ತು ಪುಣೆಯ ನಡುವೆ ಸಂಪರ್ಕ ಕಲ್ಪಿಸುವ 699 ಕಿ.ಮೀ. ಅಂತರದ ನೂತನ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲಾಗುವುದು’ ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಮುಂಗಾರು ಅವಧಿಯಲ್ಲೂ ಸಂಚಾರ ವ್ಯವಸ್ಥೆ ವ್ಯತ್ಯಯವಾಗದಂತೆ ಹೊಸ ಹೆದ್ದಾರಿ ನಿರ್ಮಾಣವಾಗಲಿದೆ. ಮಾರ್ಗದ ರೂಪುರೇಷೆ ಅಂತಿಮಗೊಂಡಿದ್ದು ಬರಪೀಡಿತ ವಲಯವಾದ ಪುಣೆ–ಸತಾರ–ಸಾಂಗ್ಲಿ ಜಿಲ್ಲೆ ಮೂಲಕ ಹಾದುಹೋಗಲಿದೆ ಎಂದು ತಿಳಿಸಿದರು.

₹ 2,344 ಕೋಟಿ ವೆಚ್ಚದ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿ ಭಾನುವಾರ ಮಾತನಾಡಿದ ಅವರು, ಉಭಯ ನಗರಗಳ ನಡುವೆ ಪ್ರಸ್ತುತ ಅಂತರ 775 ಕಿ.ಮೀ. ಆಗಿದೆ. ಹೊಸ ಹೆದ್ದಾರಿ ನಿರ್ಮಾಣದಿಂದ ಅಂತರ 76 ಕಿ.ಮೀ.ನಷ್ಟು ತಗ್ಗಲಿದೆ ಎಂದರು.

ADVERTISEMENT

ಅಲ್ಲದೆ, ಸಚಿವಾಲಯವು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಡಾಂಬರು ರಸ್ತೆಗಳ ನಿರ್ಮಾಣಕ್ಕೂ ಒತ್ತು ನೀಡಿದೆ. ಮುಂಬೈನ ಪ್ರಜ್‌ ಕೈಗಾರಿಕೆಯು ಕಬ್ಬಿನ ಸಿಪ್ಪೆ, ಜೈವಿಕ ವಸ್ತು ಬಳಸಿ ಡಾಂಬರು ಮಿಶ್ರಣವನ್ನು ಯಶಸ್ವಿಯಾಗಿ ಅಭಿೃದ್ಧಿಪಡಿಸಿದೆ ಎಂದು ತಿಳಿಸಿದೆ.

ನನ್ನದು ರಾಜಕಾರಣವಲ್ಲ,ಸಮಾಜಕಾರಣ: ಈ ಮಧ್ಯೆ, ಮರಾಠಿ ನಟ ರಾಹುಲ್ ಸೋಲಾಪುರ್‌ಕರ್‌ ಜೊತೆಗಿನ ಸಂದರ್ಶನದಲ್ಲಿ ನಿತಿನ್‌ ಗಡ್ಕರಿ ಅವರು, ‘ಇತ್ತೀಚಿನ ದಿನಗಳಲ್ಲಿ ನಾನು ರಾಜಕಾರಣ ಮಾಡುತ್ತಿಲ್ಲ. ಕೇವಲ ಸಮಾಜಕಾರಣವನ್ನಷ್ಟೇ ಮಾಡುತ್ತಿದ್ದೇನೆ’ ಎಂದು ಹೇಳಿದರು.

‘ನನ್ನ ಅಗತ್ಯ ಇದ್ದರಷ್ಟೇ ಮತ ನೀಡಿ ಎಂಬುದು ಜನತೆಗೆ ನನ್ನ ಮನವಿ. ನಾನು ಕಟೌಟ್‌ ಹಾಕುವುದಿಲ್ಲ, ಯಾರಿಗೂ ಮಾಲಾರ್ಪಣೆ ಮಾಡುವುದಿಲ್ಲ. ಯಾರನ್ನಾದರೂ ಬರಮಾಡಿಕೊಳ್ಳಲು ವಿಮಾನನಿಲ್ದಾಣಕ್ಕೆ ಹೋಗುವುದಿಲ್ಲ. ನನ್ನದೇ ಹಣ ವ್ಯಯಿಸಿ ನಾನು ಈವರೆಗೆ ಇಬ್ಬರಿಗಷ್ಟೇ ಮಾಲಾರ್ಪಣೆ ಮಾಡಿದ್ದೇನೆ. ಒಬ್ಬರು ಎ.ಬಿ.ವಾಜಪೇಯಿ, ಇನ್ನೊಬ್ಬರು ಲತಾ ಮಂಗೇಶ್ಕರ್‌’ ಎಂದರು.

‘ಒಬ್ಬ ಸಚಿವ ಯಾವುದೇ ಒಂದು ಪಕ್ಷಕ್ಕೆ ಸೀಮಿತವಲ್ಲ. ಅವರು ಸರ್ಕಾರದ ಪ್ರತಿನಿಧಿ. ನಾನು ಆ ಸಿದ್ಧಾಂತವನ್ನು ಪಾಲಿಸುತ್ತೇನೆ. ನಾನು ಆರ್‌ಎಸ್ಎಸ್‌ ಕಾರ್ಯಕರ್ತ. ಅದು ಮತ್ತು ಬಿಜೆಪಿಯ ಚಿಂತನೆಗಳು ನನ್ನ ಬದ್ಧತೆ. ಸಿದ್ಧಾಂತಗಳ ವಿಚಾರದಲ್ಲಿ ನಾನು ರಾಜಿ ಆಗಲಾರೆ. ಒಂದು ಪಕ್ಷದ ಜೊತೆಗೆ ನಾನು ಗುರುತಿಸಿಕೊಂಡಿದ್ದರೂ, ಈ ಸಮಾಜ ಮತ್ತು ದೇಶ ಕೂಡಾ ನನ್ನದೇ. ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆಗೆ ರಾಜಕಾರಣ ಒಂದು ಪ್ರಬಲ ಅಸ್ತ್ರ ಎಂದಷ್ಟೇ ನಾನು ನಂಬುತ್ತೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.