ನಿರ್ಮಲಾ ಸೀತಾರಾಮನ್
– ಪಿಟಿಐ ಚಿತ್ರ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಗುರುವಾರ ಆದಾಯ ತೆರಿಗೆ ಮಸೂದೆ–2025 ಅನ್ನು ಮಂಡಿಸಿದರು. ಈ ಮಸೂದೆಯನ್ನು ಸದನದ ಪರಿಶೀಲನಾ ಸಮಿತಿಗೆ ವಹಿಸಬೇಕು ಎಂದು ಸ್ಪೀಕರ್ ಓಂ ಬಿರ್ಲಾ ಅವರಲ್ಲಿ ಮನವಿ ಮಾಡಿದರು.
ಮಸೂದೆ ಮಂಡನೆಯ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರಿಂದ ವಿರೋಧ ವ್ಯಕ್ತವಾಯಿತು. ಆದರೆ, ಮಸೂದೆಯ ಮಂಡನೆಗೆ ಸದನವು ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು.
ಹೊಸ ಮಸೂದೆಯಲ್ಲಿ ಕೆಲವು ಕಠಿಣ ಪಾರಿಭಾಷಿಕ ಪದಗಳ ಬದಲಿಗೆ ಸರಳವಾದ ಪದಗಳನ್ನು ಬಳಕೆ ಮಾಡಲಾಗಿದೆ.
ಈಗ ಇರುವ ಕಾನೂನಿನಲ್ಲಿನ ಸೆಕ್ಷನ್‌ಗಳಿಗಿಂತ ಹೆಚ್ಚು ಸೆಕ್ಷನ್‌ಗಳು ಹೊಸ ಮಸೂದೆಯಲ್ಲಿವೆ ಎಂದು ವಿರೋಧ ಪಕ್ಷದ ಕೆಲವು ಸದಸ್ಯರು ವ್ಯಕ್ತಪಡಿಸಿದ ಆಕ್ಷೇಪಕ್ಕೆ ಉತ್ತರಿಸಿದ ನಿರ್ಮಲಾ ಅವರು, ಮಸೂದೆಯಲ್ಲಿ 536 ಸೆಕ್ಷನ್‌ಗಳು ಮಾತ್ರ ಇರುತ್ತವೆ ಎಂದರು.
1961ರಲ್ಲಿ ಈ ಕಾನೂನಿನಲ್ಲಿ ಕೆಲವೇ ಸೆಕ್ಷನ್‌ಗಳಿದ್ದವು. ಆದರೆ, ನಂತರದಲ್ಲಿ ನಡೆದ ಬದಲಾವಣೆಗಳ ಕಾರಣದಿಂದಾಗಿ ಒಟ್ಟು ಸೆಕ್ಷನ್‌ಗಳ ಸಂಖ್ಯೆಯು 819ಕ್ಕೆ ಏರಿಕೆ ಆಗಿದೆ ಎಂದು ಹೇಳಿದರು.
ನವದೆಹಲಿ: ಖಾಸಗಿ ವಲಯದಲ್ಲಿ ಬಂಡವಾಳ ಹೂಡಿಕೆ ಹೆಚ್ಚಳ ಹಾಗೂ ಆರ್ಥಿಕ ಬೆಳವಣಿಗೆಗೆ ಉತ್ತೇಜನ ಕಲ್ಪಿಸಲು 2025–26ನೇ ಸಾಲಿನ ಬಜೆಟ್‌ನಲ್ಲಿ ಒತ್ತು ನೀಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಗುರುವಾರ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು ‘ಬಜೆಟ್ ತಯಾರಿಯಲ್ಲಿ ಈ ಬಾರಿ ಹಲವು ಸವಾಲುಗಳು ಎದುರಾಗಿದ್ದವು. ಇವುಗಳನ್ನು ಮೀರಿ ಸಿದ್ಧಪಡಿಸಲಾಯಿತು’ ಎಂದರು. ಮುಂದಿನ ಆರ್ಥಿಕ ವರ್ಷದಲ್ಲಿ ಸರ್ಕಾರವು ಬಂಡವಾಳ ವೆಚ್ಚಕ್ಕೆ ₹19.08 ಲಕ್ಷ ಕೋಟಿ ನಿಗದಿಪಡಿಸಿದೆ ಎಂದು ಹೇಳಿದರು.
ಆದಾಯ ತೆರಿಗೆ ದಾವೆಗಳ ಸಂಖ್ಯೆ ತಗ್ಗಿಸುವುದೇ ಹೊಸ ಮಸೂದೆಯ ಉದ್ದೇಶವಾಗಿದೆ. ಹೊಸ ಅರ್ಥ ವಿವರಣೆ ಸಹಿತ ಜನಸಾಮಾನ್ಯರಿಗೆ ತೆರಿಗೆ ಬಗ್ಗೆ ಸರಳವಾಗಿ ವಿವರಿಸಲಾಗಿದೆ. 1961ರ ಆದಾಯ ತೆರಿಗೆ ಕಾಯ್ದೆಯಲ್ಲಿ 5.12 ಲಕ್ಷ ಪದಗಳಿವೆ. ಹೊಸ ಮಸೂದೆಯಲ್ಲಿ ಇವುಗಳನ್ನು 2.6 ಲಕ್ಷಕ್ಕೆ ಇಳಿಸಲಾಗಿದೆ.
ಹಳೆ ಕಾಯ್ದೆಯಲ್ಲಿ ಒಟ್ಟು 47 ಅಧ್ಯಾಯಗಳಿವೆ. ಇವುಗಳನ್ನು 23ಕ್ಕೆ ಇಳಿಸಲಾಗಿದೆ. ಟೇಬಲ್‌ಗಳ ಸಂಖ್ಯೆಯನ್ನು 18ರಿಂದ 57ಕ್ಕೆ ಹೆಚ್ಚಿಸಲಾಗಿದೆ. 1,200 ನಿಬಂಧನೆಗಳು ಮತ್ತು 900 ವಿವರಣೆಯನ್ನು ಕೈಬಿಡಲಾಗಿದೆ. ಮಸೂದೆಯಲ್ಲಿ ಗಣನೀಯ ಬದಲಾವಣೆ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಹಳೆಯ ಕಾಯ್ದೆಯು 1962ರ ಏಪ್ರಿಲ್ 1ರಿಂದ ದೇಶದಲ್ಲಿ ಅಧಿಕೃತವಾಗಿ ಜಾರಿಗೆ ಬಂದಿತು. 4 ಸಾವಿರಕ್ಕೂ ಹೆಚ್ಚು ತಿದ್ದುಪಡಿ ಮಾಡಲಾಗಿದೆ. ಹೊಸ ಮಸೂದೆ ಬಗ್ಗೆ ವಿವಿಧ ಸಂಘ ಸಂಸ್ಥೆಗಳು, ಕಂಪನಿಗಳು ಮತ್ತು ನಾಗರಿಕರಿಂದ ಅಭಿಪ್ರಾಯ ಆಹ್ವಾನಿಸಲಾಗಿತ್ತು. ಆನ್‌ಲೈನ್ ಮೂಲಕ ಒಟ್ಟು 20,976 ಸಲಹೆ ಸ್ವೀಕರಿಸಲಾಗಿದೆ.
ಟಿಡಿಎಸ್/ಟಿಸಿಎಸ್ ರಿಯಾಯಿತಿಗೆ ಸಂಬಂಧಿಸಿದಂತೆ ಹಾಲಿ ಇರುವ ನಿಬಂಧನೆಗಳನ್ನು ಸರಳವಾಗಿ ಕೋಷ್ಟಕ ರೂಪದಲ್ಲಿ ವಿವರಿಸಲಾಗಿದೆ. ಲಾಭದ ಉದ್ದೇಶ ಇಲ್ಲದ ಸಂಸ್ಥೆಗಳ ಬಗೆಗಿನ ಅಧ್ಯಾಯವನ್ನು ಸರಳ ಭಾಷೆಯಲ್ಲಿ ವಿವರಿಸಲಾಗಿದೆ. ಈ ಅಧ್ಯಾಯದ ಪರಿಷ್ಕರಣೆಯಿಂದ
34,547 ಪದಗಳು ಕಡಿಮೆಯಾಗಿವೆ.
ಹೊಸ ಮಸೂದೆಯಲ್ಲಿ ಸರ್ಕಾರದ ನೀತಿ ಅಥವಾ ತೆರಿಗೆ ದರಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆ ಮಾಡಿಲ್ಲ. ವಿದೇಶಿ ತೆರಿಗೆಗೆ ಸಂಬಂಧಿಸಿದ ಸೆಕ್ಷನ್‌ಗಳ ಬಗ್ಗೆ ಬಹು ವ್ಯಾಖ್ಯಾನ ಗಳಿದ್ದವು. ಇವುಗಳನ್ನು ಕಡಿಮೆ ಮಾಡಲಾಗಿದೆ.
ತೆರಿಗೆ ವಂಚನೆ ಆರೋಪ ಕುರಿತಂತೆ ನಡೆಯುವ ದಾಳಿ ವೇಳೆ ಇ–ಮೇಲ್, ಷೇರು ವ್ಯವಹಾರ, ಸಾಮಾಜಿಕ ಜಾಲತಾಣದ ಖಾತೆ, ಆನ್‌ಲೈನ್ ಹೂಡಿಕೆ, ಬ್ಯಾಂಕ್ ಖಾತೆ, ಡಿಜಿಟಲ್ ಅಪ್ಲಿಕೇಷನ್ ಸೇವೆ ಸೇರಿ ತೆರಿಗೆದಾರರಿಗೆ ಸಂಬಂಧಿಸಿದ ಎಲ್ಲಾ ಖಾತೆಗಳನ್ನು ನೇರವಾಗಿ ಪರಿಶೀಲನೆ ನಡೆಸುವ ಅಧಿಕಾರವನ್ನು ಹೊಸ ಮಸೂದೆಯಲ್ಲಿ ತೆರಿಗೆ ಅಧಿಕಾರಿಗಳಿಗೆ ನೀಡಲಾಗಿದೆ.
ಹಳೆಯ ಕಾಯ್ದೆಯಡಿ ಅಧಿಕಾರಿಗಳಿಗೆ ಇದಕ್ಕೆ ಅವಕಾಶ ಇರಲಿಲ್ಲ. ಲ್ಯಾಪ್‌ಟಾಪ್, ಹಾರ್ಡ್‌ಡಿಸ್ಕ್, ಇ–ಮೇಲ್ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ತೆರಿಗೆದಾರರಿಗೆ ಒತ್ತಾಯ ಮಾಡಬೇಕಿತ್ತು. ಮಸೂದೆ ಯಲ್ಲಿ ಎಲೆಕ್ಟ್ರಾನಿಕ್ ದಾಖಲೆಗಳ ಕೂಲಂಕಷ ಪರಿಶೀಲನೆ ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.