
ನವದೆಹಲಿ: ‘ಹೊಸ ಕಾರ್ಮಿಕ ಸಹಿಂತೆಗಳು ಕಾರ್ಮಿಕರಿಗೆ ದಿನಕ್ಕೆ ₹400 ಕನಿಷ್ಠ ವೇತನ, ₹25 ಲಕ್ಷ ಮೊತ್ತದ ಆರೋಗ್ಯ ಸುರಕ್ಷತೆ ಮತ್ತು ನಗರ ಪ್ರದೇಶಗಳಲ್ಲಿನ ಭಾರತೀಯ ಕಾರ್ಮಿಕರಿಗೆ ಉದ್ಯೋಗ ಖಾತರಿ ನೀಡುವುದನ್ನು ಖಚಿತಪಡಿಸುತ್ತದೆಯೇ’ ಎಂದು ಕಾಂಗ್ರೆಸ್, ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಹೊಸ ಕಾರ್ಮಿಕ ಸಂಹಿತೆಯು ಕಾರ್ಮಿಕರಿಗೆ ಹೇಗೆ ‘ಶ್ರಮಿಕ್ ನ್ಯಾಯ’ವನ್ನು ಪರಿಣಾಮಕಾರಿಯಾಗಿ ಒದಗಿಸುತ್ತದೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಕಾರ್ಮಿಕ ಸಂಹಿತೆಗಳ ಪರಿಣಾಮಕಾರಿ ಅನುಷ್ಠಾನವನ್ನು ಕರ್ನಾಟಕ ಮತ್ತು ರಾಜಸ್ಥಾನದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರಗಳಿಂದ ಕಲಿಯುವಂತೆ ಸಲಹೆ ನೀಡಿದೆ.
ಈ ಕುರಿತು ‘ಎಕ್ಸ್’ ಮಾಡಿರುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಈಗಾಗಲೇ ಅಸ್ತಿತ್ವದಲ್ಲಿದ್ದ 29 ಕಾರ್ಮಿಕ ಕಾಯ್ದೆಗಳನ್ನು ನಾಲ್ಕು ಸಂಹಿತೆಗಳಲ್ಲಿ ಸೇರಿಸಿ, ಇನ್ನೂ ಅಧಿಸೂಚನೆ ಹೊರಡಿಸಿರುವ ಹಂತದಲ್ಲೇ ಇದೊಂದು ಕ್ರಾಂತಿಕಾರಿ ಸುಧಾರಣೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಈ ಸಂಹಿತೆಗಳು ಭಾರತದ ಕಾರ್ಮಿಕರ ಐದು ಅಗತ್ಯ ಬೇಡಿಕೆಗಳನ್ನು ಈಡೇರಿಸುತ್ತದೆಯೇ?’ ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
‘ಎಲ್ಲ ರೀತಿಯ ಅಸಂಘಟಿತ ಕಾರ್ಮಿಕರಿಗೆ, ಎಂಜಿಎನ್‌ಆರ್‌ಇಜಿಎ ಸೇರಿದಂತೆ ದಿನಕ್ಕೆ ₹400 ರಾಷ್ಟ್ರೀಯ ಕನಿಷ್ಠ ವೇತನ. ಆರೋಗ್ಯ ಹಕ್ಕಿನ ಅಡಿಯಲ್ಲಿ ₹25 ಲಕ್ಷ ಮೊತ್ತದ ಆರೋಗ್ಯ ವಿಮೆ, ನಗರ ಪ್ರದೇಶಗಳಿಗೆ ಉದ್ಯೋಗ ಖಾತರಿ ನೀಡುವುದು, ಜೀವ ವಿಮೆ ಮತ್ತು ಅಪಘಾತ ವಿಮೆ ಸೇರಿದಂತೆ ಸಮಗ್ರ ಸಾಮಾಜಿಕ ಭದ್ರತೆ ಮತ್ತು ಪ್ರಮುಖ ಸರ್ಕಾರಿ ಉದ್ಯೋಗದಲ್ಲಿ ಗುತ್ತಿಗೆ ಪದ್ಧತಿಯನ್ನು ನಿಲ್ಲಿಸುವ ಬದ್ಧತೆಯನ್ನು ಈ ಹೊಸ ಕಾರ್ಮಿಕ ಸಂಹಿತೆಗಳು ಪ್ರದರ್ಶಿಸುತ್ತವೆಯೇ’ ಎಂದು ಕೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.