ADVERTISEMENT

ಮಸೂದೆಗಳಿಂದ ಕಾರ್ಮಿಕ ಸಂಘಟನೆಗಳು ದುರ್ಬಲ: ಕಾಂಗ್ರೆಸ್‌ ವಾಗ್ದಾಳಿ

ಪಿಟಿಐ
Published 26 ಸೆಪ್ಟೆಂಬರ್ 2020, 14:33 IST
Last Updated 26 ಸೆಪ್ಟೆಂಬರ್ 2020, 14:33 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ:ಸಂಸತ್ತು ಅಂಗೀಕರಿಸಿರುವ ಮೂರೂ ಮಸೂದೆಗಳು ಕಾರ್ಮಿಕ ವಿರೋಧಿಯಾಗಿವೆಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

ಕಾರ್ಮಿಕರ ರಕ್ಷಣೆಗಿದ್ದ ಕವಚವನ್ನೇ ತೆಗೆದುಹಾಕಲಾಗಿದ್ದು, ಈ ಮೂಲಕ ಕಾರ್ಮಿಕ ಸಂಘಟನೆಗಳನ್ನುಶಾಸನಗಳು ದುರ್ಬಲಗೊಳಿಸಲಿವೆ ಎಂದು ಶನಿವಾರ ಹೇಳಿದೆ.

‘ಕಂಪನಿಗಳ ಮೇಲೆ ಯಾವುದೇ ನಿಯಂತ್ರಣ ಸಾಧಿಸಲು ಇನ್ನು ಸರ್ಕಾರಕ್ಕೆ ಆಗುವುದಿಲ್ಲ. 100ರಿಂದ 300 ಮಂದಿ ಕಾರ್ಮಿಕರನ್ನು ಹೊಂದಿರುವ ಕಂಪನಿಗಳು ಸರ್ಕಾರದ ಅನುಮತಿ ಇಲ್ಲದೆ ಕಾರ್ಮಿಕರನ್ನು ನೌಕರಿಯಿಂದ ತೆಗೆದುಹಾಕುವ ಸ್ವಾತಂತ್ಯವನ್ನು ಸಂಹಿತೆಯು ನೀಡುತ್ತದೆ’ ಎಂದು ತಿಳಿಸಿದೆ. ‌

ADVERTISEMENT

‘ಹೊಸ ಸಂಹಿತೆಗಳು ವ್ಯವಹಾರ ಪ್ರಕ್ರಿಯೆಗಳನ್ನು ಸುಲಭಗೊಳಿಸುತ್ತದೆ ಎಂದು ಸರ್ಕಾರ ಹೇಳುತ್ತಿರುವುದು ಸುಳ್ಳು.ಸರ್ಕಾರವು ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸುತ್ತಿದೆ ಮತ್ತು ಕಾರ್ಮಿಕರ ಸುರಕ್ಷತೆಯನ್ನು ಸಂಪೂರ್ಣ ನಿರ್ಲಕ್ಷಿಸಿದೆ’ ಎಂದುಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯಗಳ ಅಧಿಕಾರವನ್ನು ಈ ಮಸೂದೆಗಳ ಮೂಲಕ ಮೊಟಕುಗೊಳಿಸುತ್ತಿರುವ ಕಾರ್ಮಿಕ ವಿರೋಧಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿರುವ ಅವರು, ಎಲ್ಲ ಪಕ್ಷಗಳು ಸಂಹಿತೆಗಳನ್ನು ವಿರೋಧಿಸುತ್ತಿರುವಾಗ, ವಿರೋಧ ಪಕ್ಷಗಳ ದನಿಯನ್ನು ಮೋದಿ ನೇತೃತ್ವದ ಸರ್ಕಾರ ಆಲಿಸುತ್ತಿಲ್ಲ. ಅವರಿಗೆ ಕೇಳುತ್ತಿರುವುದು ಬರೀ ಬಂಡವಾಳಶಾಹಿಗಳ ದನಿಯಷ್ಟೇ ಎಂದು ಕಿಡಿಕಾರಿದ್ದಾರೆ.

ರೈತರಿಗೆ ದ್ರೋಹ ಎಸಗಿದಂತೆಯೇ ಇದೀಗ ತನ್ನ ಹಿತಾಸಕ್ತಿಗಳಿಗೆ ಕಾರ್ಮಿಕರನ್ನು ಬಲಿಕೊಡುತ್ತಿದೆ. ವಲಸೆ ಕಾರ್ಮಿಕರನ್ನು ಲಾಕ್‌ಡೌನ್‌ ವೇಳೆ ಸರ್ಕಾರ ಹೇಗೆ ನಡೆಸಿಕೊಂಡಿತು ಎಂಬುದಕ್ಕೆ ಇಡೀ ದೇಶವೇ ಸಾಕ್ಷಿಯಾಗಿದೆ. ವಲಸೆ ಕಾರ್ಮಿಕರಿಗೆ ಈ ಕಾನೂನುಗಳಿಂದ ಏನೂ ಪ್ರಯೋಜನವಾಗದು ಎಂದು ಕಾಂಗ್ರೆಸ್ ವಕ್ತಾರ ಪವನ್‌ ಖೇರಾ ಹೇಳಿದ್ದಾರೆ.

ಮಸೂದೆಗಳನ್ನು ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ್ದವು. ಇವುಗಳಿಗೆ ರಾಷ್ಟ್ರಪತಿಗಳು ಅಂಕಿತ ಹಾಕಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.