ADVERTISEMENT

ಮುಂದಿನ ವರ್ಷ ನೂತನ ಮಸೀದಿ ನಿರ್ಮಾಣ: ಇಂಡೊ–ಇಸ್ಲಾಮಿಕ್‌ ಫೌಂಡೇಷನ್

ಇಂಡೊ–ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್ ಅಧ್ಯಕ್ಷರಿಂದ‌ ಮಾಹಿತಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 14:23 IST
Last Updated 6 ಡಿಸೆಂಬರ್ 2025, 14:23 IST
ಬಾಬರಿ ಮಸೀದಿಯ ಸಂಗ್ರಹ ಚಿತ್ರ –ಪಿಟಿಐ 
ಬಾಬರಿ ಮಸೀದಿಯ ಸಂಗ್ರಹ ಚಿತ್ರ –ಪಿಟಿಐ    

ಲಖನೌ: ಅಯೋಧ್ಯೆಯಿಂದ 25 ಕಿ.ಮೀ. ದೂರದ ಧನ್ನಿಪುರದಲ್ಲಿ ನೂತನ ಮಸೀದಿ ನಿರ್ಮಾಣವಾಗಲಿದೆ. ಅದರ ಕಾಮಗಾರಿಯು 2026ರ ಏಪ್ರಿಲ್‌ನಲ್ಲಿ ಆರಂಭವಾಗುವ ಸಾಧ್ಯತೆ ಇದೆ ಎಂದು ಮಸೀದಿ ನಿರ್ಮಾಣದ ಹೊಣೆ ಹೊತ್ತಿರುವ ಇಂಡೊ–ಇಸ್ಲಾಮಿಕ್‌ ಕಲ್ಚರಲ್‌ ಫೌಂಡೇಷನ್ (ಐಐಸಿಎಫ್‌) ತಿಳಿಸಿದೆ. 

‘ಮಸೀದಿ ನಿರ್ಮಾಣ ಕುರಿತ ಪರಿಷ್ಕೃತ ನೀಲನಕ್ಷೆಯನ್ನು ಡಿಸೆಂಬರ್‌ ಅಂತ್ಯದ ವೇಳೆಗೆ ಸಲ್ಲಿಸಲಿದ್ದು, ಅಯೋಧ್ಯೆ ಅಭಿವೃದ್ಧಿ ಮಂಡಳಿ (ಎಡಿಎ) ಅನುಮತಿ ನೀಡಬೇಕಿದೆ. ಎಲ್ಲವೂ ಅಂದುಕೊಂಡಂತೆ ಆದರೆ 2026ರ ಏಪ್ರಿಲ್ ವೇಳೆಗೆ ಕಾಮಗಾರಿಯು ಪ್ರಾರಂಭವಾಗಬಹುದು’ ಎಂದು ಐಐಸಿಎಫ್‌ ಅಧ್ಯಕ್ಷ ಜುಫಾರ್‌ ಫಾರೂಕಿ ತಿಳಿಸಿದರು.

1992ರಲ್ಲಿ ಉದ್ರಿಕ್ತರ ಗುಂಪು ಬಾಬರಿ ಮಸೀದಿಯನ್ನು ಧ್ವಂಸ ಮಾಡಿತ್ತು. 2019ರ ನವೆಂಬರ್ 9ರಂದು ರಾಮ ಜನ್ಮಭೂಮಿ– ಬಾಬರಿ ಮಸೀದಿ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ವಿವಾದಿತ ಜಾಗವನ್ನು ರಾಮಮಂದಿರ ಟ್ರಸ್ಟ್‌ಗೆ ನೀಡಿ, ಅಯೋಧ್ಯೆಯ ಸುತ್ತಮುತ್ತ ಐದು ಎಕರೆ ಭೂಮಿಯನ್ನು ಮಸೀದಿಗಾಗಿ ಮಂಜೂರು ಮಾಡುವಂತೆ ನಿರ್ದೇಶಿಸಿತ್ತು. ಅದರಂತೆ ಅಯೋಧ್ಯೆ ಜಿಲ್ಲಾಡಳಿತವು ಔಪಚಾರಿಕವಾಗಿ ಧನ್ನಿಪುರದಲ್ಲಿ ಐದು ಎಕರೆ ಭೂಮಿಯನ್ನು ಮಂಜೂರು ಮಾಡಿದೆ. ಆದಾಗ್ಯೂ ಮಸೀದಿ ಸ್ಥಾಪನೆ ವಿಚಾರದಲ್ಲಿ ಅನಿಶ್ಚಿತತೆ ಮುಂದುವರಿದಿದೆ.

ADVERTISEMENT

‘ಮೊದಲಿಗೆ ಎಡಿಎ ಮಸೀದಿ ಯೋಜನೆಯ ನೀಲನಕ್ಷೆಯನ್ನು ತಿರಸ್ಕರಿಸಿತು. ಸಮುದಾಯದಿಂದ ಅತ್ಯಾಧುನಿಕ ವಿನ್ಯಾಸಕ್ಕೆ ಆಕ್ಷೇಪ ವ್ಯಕ್ತವಾದ ಕಾರಣ, ಐಐಸಿಎಫ್‌ ಸಹ ಆ ನೀಲನಕ್ಷೆಯನ್ನು ಕೈಬಿಟ್ಟಿದೆ. ಸದ್ಯ ಸಾಂಪ್ರದಾಯಿಕ ಕಟ್ಟಡ ನಿರ್ಮಾಣಕ್ಕೆ ಅದು ಮುಂದಾಗಿದ್ದು, ಯೋಜನೆಯು ಸಿದ್ಧವಾಗಿದೆ’ ಎಂದು ಫಾರೂಕಿ ತಿಳಿಸಿದರು.

‘ಎಡಿಎ ಅನುಮೋದನೆಯೇ ಮಸೀದಿ ನಿರ್ಮಾಣ ಕಾರ್ಯದ ಮೊದಲ ಹೆಜ್ಜೆ. ಆದರೆ, ಧನ್ನಿಪುರದಲ್ಲಿ ಮೀಸಲಿಟ್ಟಿರುವ ಜಾಗದ ಸುತ್ತ ಅಭಾವ ಇರುವ ಭೂಮಿಯ ಸ್ವಾಧೀನ ಪ್ರಕ್ರಿಯೆ ಸೇರಿದಂತೆ ಹಲವು ವಿಷಯಗಳತ್ತ ಐಐಸಿಎಫ್‌ ಗಮನಹರಿಸುತ್ತಿದೆ’ ಎಂದರು.

‘ಮಸೀದಿ ನಿರ್ಮಾಣಕ್ಕೆ ಹೆಚ್ಚುವರಿ ಭೂಮಿಯ ಸ್ವಾಧೀನವೇ ಒಂದು ಸಮಸ್ಯೆಯಾಗಿದೆ. ಬೇರೆ ಬೇರೆ ಜಾಗಗಳಲ್ಲಿ, ಹಂತ ಹಂತವಾಗಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ’ ಎಂದು ಮಾಹಿತಿ ನೀಡಿದರು.

‘ಧನ್ನಿಪುರದಲ್ಲಿ ಐದು ಎಕರೆ ಜಗವನ್ನು ಟ್ರಸ್ಟ್‌ಗೆ ನೀಡಲಾಗಿದೆ. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ ನಾಲ್ಕು ಎಕರೆ ಜಾಗ ಮಾತ್ರ ಲಭ್ಯವಿದೆ. ಹೀಗಾಗಿ ಒಂದಕ್ಕಿಂತ ಹೆಚ್ಚು ಪ್ರದೇಶಗಳಲ್ಲಿ ಮಸೀದಿ ಯೋಜನೆಯು ಅನುಷ್ಠಾನವಾಗುವ ಸಾಧ್ಯತೆ ಇದೆ’ ಎಂದು ತಿಳಿಸಿದರು.

‘ಮಸೀದಿ ನಿರ್ಮಾಣಕ್ಕೆ ಬೇಕು ₹65 ಕೋಟಿ’ ‘

ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡು ‘ಧರ್ಮ ಧ್ವಜ’ವನ್ನು ಹಾರಿಸಲಾಗಿದೆ. ಆದರೆ ಮಸೀದಿ  ನಿರ್ಮಾಣಕ್ಕೆ ಕಾಮಗಾರಿಯೇ ಆರಂಭವಾಗಿಲ್ಲ ಎಂಬ ಹೋಲಿಕೆಯೇ ಸರಿಯಲ್ಲ. ರಾಮಮಂದಿರವು ಸಾರ್ವಜನಿಕ ಆಂದೋಲನದಂತೆ ರೂಪುಗೊಂಡಿದೆ. ಮಸೀದಿ ನಿರ್ಮಾಣಕ್ಕೆ ಎಡಿಎ ಅನುಮೋದನೆ ನೀಡಿದರೂ ಅದಕ್ಕಾಗಿ ದೊಡ್ಡ ಮೊತ್ತದ ಹಣದ ಅಗತ್ಯವಿದೆ’ ಎಂದು ಫಾರೂಕಿ ಹೇಳಿದರು.

‘ಮಸೀದಿ ಮತ್ತು ಇತರ ಕಟ್ಟಡಗಳ ನಿರ್ಮಾಣಕ್ಕಾಗಿ ₹65 ಕೋಟಿ ಬೇಕಿದೆ ಎಂದು ಅಂದಾಜಿಸಲಾಗಿದೆ. ಆದರೆ ಈಗ ನಮ್ಮ ಬಳಿ ಕೇವಲ ₹3 ಕೋಟಿ ಇದೆ. ದೇಣಿಗೆ ಮತ್ತು ಸಾರ್ವಜನಿಕರ ನೆರವಿನಿಂದ ಮಾತ್ರ ಆರ್ಥಿಕ ಅಡೆತಡೆಗಳು ನಿವಾರಣೆಯಾಗಿ ಮಸೀದಿ ನಿರ್ಮಾಣ ಸಾಧ್ಯ’ ಎಂದು ತಿಳಿಸಿದರು.

‘10–15 ಕೋಟಿ ಹಣವಿದ್ದರೂ ಯೋಜನೆಯನ್ನು ಆರಂಭಿಸಬಹುದು. ಈಗಾಗಿ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ (ಎಫ್‌ಸಿಆರ್‌ಎ)ಯಡಿ ನೋಂದಾಯಿಸುವುದೂ ಸೇರಿದಂತೆ ಹಲವು ಅನುಮತಿಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ. ಬಳಿಕ ವಿದೇಶಗಳಿಂದ ದೇಣಿಗೆಯನ್ನು ಪಡೆಯಬಹುದು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.