ನವದೆಹಲಿ: ‘ಡೀಪ್‌ಫೇಕ್’ಗಳ ನಿಯಂತ್ರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಬಿಗಿ ನಿಯಮಗಳನ್ನು ರೂಪಿಸಲು ಚಿಂತನೆ ನಡೆಸಿದೆ.
ಡೀಪ್‌ಫೇಕ್‌ಗಳನ್ನು ಸೃಷ್ಟಿ ಮಾಡುವವರು ಹಾಗೂ ಅವುಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವ ವೇದಿಕೆಗಳಿಗೆ ದಂಡ ವಿಧಿಸುವುದು ಸೇರಿದಂತೆ ಕಠಿಣ ನಿಯಮಗಳನ್ನು ರೂಪಿಸಲಾಗುತ್ತದೆ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳು, ನಾಸ್‌ಕಾಂ, ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದ ಪ್ರಾಧ್ಯಾಪಕರು ಸೇರಿದಂತೆ ಎಲ್ಲ ಭಾಗೀದಾರರ ಜೊತೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಸಚಿವ ವೈಷ್ಣವ್, ‘ಡೀಪ್‌ಫೇಕ್‌ಗಳು ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೊಸ ಬೆದರಿಕೆಗಳಾಗಿವೆ. ಇವು ಸಮಾಜ ಹಾಗೂ ಸಾಮಾಜಿಕ ಸಂಸ್ಥೆಗಳಲ್ಲಿನ ನಂಬಿಕೆಯನ್ನು ದುರ್ಬಲಗೊಳಿಸುತ್ತವೆ‘ ಎಂದು ಹೇಳಿದ್ದಾರೆ.
‘ಈ ವಿಷಯಕ್ಕೆ ಸಂಬಂಧಿಸಿ ನಿಯಮಾವಳಿಗಳ ರಚನೆಗೆ ಕೂಡಲೇ ಚಾಲನೆ ನೀಡಲಾಗುವುದು. ಶೀಘ್ರದಲ್ಲಿಯೇ ಡೀಪ್‌ಫೇಕ್‌ಗಳ ಕುರಿತಂತೆ ಪ್ರತ್ಯೇಕ ನಿಯಮಗಳನ್ನು ಹೊಂದಲಾಗುವುದು’ ಎಂದು ಹೇಳಿದ್ದಾರೆ.
ಡೀಪ್‌ಫೇಕ್ ಸಮಸ್ಯೆಗೆ ಸಂಬಂಧಿಸಿ ನಾಲ್ಕು ಪ್ರಮುಖ ಅಂಶಗಳನ್ನು ಗುರುತಿಸಲಾಗಿದೆ. ಡೀಪ್‌ಫೇಕ್‌ಗಳ ಪತ್ತೆ, ಡೀಪ್‌ಫೇಕ್‌ಗಳ ಪ್ರಸಾರ ತಡೆಗಟ್ಟುವುದು, ಇವುಗಳ ಕುರಿತು ವರದಿ ಸಲ್ಲಿಸುವ ವಿಧಾನಗಳನ್ನು ಬಲಪಡಿಸುವುದು ಹಾಗೂ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಈ ನಾಲ್ಕು ಅಂಶಗಳಾಗಿವೆ. ಈ ವಿಚಾರವಾಗಿ ಕ್ರಮ ಕೈಗೊಳ್ಳುವುದಕ್ಕೆ ಸಂಬಂಧಿಸಿ 10 ದಿನಗಳ ಒಳಗಾಗಿ ಕರಡು ಸಿದ್ಧಪಡಿಸಲಾಗುವುದು’ ಎಂದು ಹೇಳಿದ್ದಾರೆ.
‘ಡೀಪ್‌ಫೇಕ್ ಕುರಿತಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಭಾಗೀದಾರರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದರು. ದೀಪ್‌ಫೇಕ್‌ಗಳ ಪತ್ತೆಗಾಗಿ ಲಭ್ಯವಿರುವ ಎಲ್ಲ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಎಲ್ಲ ಸಾಮಾಜಿಕ ಮಾಧ್ಯಮ ವೇದಿಕೆ ಪ್ರತಿನಿಧಿಗಳು ಸಮ್ಮತಿಸಿದರು’ ಎಂದೂ ಸಚಿವ ವೈಷ್ಣವ್ ಹೇಳಿದ್ದಾರೆ.
Cut-off box - ಪ್ರಮುಖ ಅಂಶಗಳು * ಡೀಪ್‌ಫೇಕ್‌ಗಳ ಕುರಿತು ಮತ್ತಷ್ಟು ಚರ್ಚೆಗೆ ಡಿಸೆಂಬರ್ ಮೊದಲ ವಾರದಲ್ಲಿ ಮತ್ತೊಂದು ಸುತ್ತಿನ ಸಭೆಗೆ ತೀರ್ಮಾನ * ಭಾರತದಲ್ಲಿ ಸದ್ಯ 80 ಕೋಟಿಗೂ ಅಧಿಕ ಮಂದಿ ಇಂಟರ್‌ನೆಟ್ ಬಳಸುತ್ತಿದ್ದು ಎರಡು ವರ್ಷಗಳಲ್ಲಿ ಈ ಸಂಖ್ಯೆ 120 ಕೋಟಿ ದಾಟುವ ಅಂದಾಜಿದೆ * ಡೀಪ್‌ಫೇಕ್ ಬಳಸಿ ನಿರ್ಮಿಸುವ ಜಾಹೀರಾತುಗಳು ಪ್ರಚಾರ ವಿಷಯವಸ್ತುಗಳು ಜನರ ದಾರಿತಪ್ಪಿಸುವಂತಿವೆ– ವೈಷ್ಣವ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.