ADVERTISEMENT

ಕೋವಿಡ್-19 ಭೀತಿ | ಪತ್ರಿಕೆಗಳು ಸುರಕ್ಷಿತ, ನಿರಂತರ ಪ್ರಸಾರ ಅತ್ಯಗತ್ಯ: ಕೇಂದ್ರ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 11:42 IST
Last Updated 24 ಮಾರ್ಚ್ 2020, 11:42 IST
   

ನವದೆಹಲಿ: ದೇಶದಾದ್ಯಂತ 10 ಜನರನ್ನು ಬಲಿಪಡೆದಿರುವ ಜಾಗತಿಕ ಪಿಡುಗು ಕೋವಿಡ್- 19 ಸೋಂಕು ತಡೆಗಾಗಿ, ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ಆದೇಶ ಹೊರಡಿಸಲಾಗಿದೆ. ಈ ವೇಳೆ ಪತ್ರಿಕೆಗಳಿಂದಲೂ ಸೋಂಕು ತಗುಲುತ್ತದೆ ಎಂಬ ವದಂತಿ ಹರಡಿತ್ತು. ಅದನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ ಪತ್ರಿಕೆಗಳುಸುರಕ್ಷಿತವಾಗಿವೆ ಮತ್ತು ಅವುಗಳ ನಿರಂತರ ಪ್ರಸಾರ ಅತ್ಯಗತ್ಯ ಎಂದು ಹೇಳಿದೆ.

ಪತ್ರಿಕೆಗಳ ಮೂಲಕ ಸಾರ್ವಜನಿಕರು ನಿಖರ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಿಳಿಯಲಾಗಿರುವ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯ ಎಂದೂ ತಿಳಿಸಿದೆ.

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಕೇಂದ್ರ, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ಕಾರ್ಯಾಚರಣೆಯ ನಿರಂತರತೆಯ ಮಹತ್ವವನ್ನು ಒತ್ತಿ ಹೇಳಿದೆ. ಸಮಯೋಚಿತವಾಗಿ ಮತ್ತು ಅಧಿಕೃತ ಮಾಹಿತಿ ಪ್ರಸಾರಕ್ಕೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ನೆರವಾಗಬೇಕು ಎಂದು ಒತ್ತಾಯಿಸಿದೆ.

ADVERTISEMENT

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಮಾರ್ಚ್ 23 ರಂದು ಸುತ್ತೋಲೆ ಕಳುಹಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಾರ್ಚ್‌21 ರಂದು ಜನತಾ ಕರ್ಫ್ಯೂ ಸಂಬಂಧವಾಗಿ ಮಾಡಿದ ಭಾಷಣದ ವೇಳೆ, ಲಾಕ್‌ಡೌನ್‌ಗಳ ನಡುವೆಯೂ ಕಾರ್ಯನಿರ್ವಹಿಸಬೇಕಾದ ಅಗತ್ಯ ಸೇವೆಗಳ ಬಗ್ಗೆ ಪ್ರಸ್ತಾಪಿಸಿದ್ದರು. ಆ ಪಟ್ಟಿಗೆ ಮಾಧ್ಯಮವನ್ನೂ ಸೇರಿಸಿದ್ದರು. ಅದಾದ ಕೆಲವು ದಿನಗಳಲ್ಲೇ ಈ ಸುತ್ತೋಲೆ ಪ್ರಕಟವಾಗಿದೆ.

'ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದು ಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಸುದ್ದಿ ಪ್ರಕಟಿಸುದಕ್ಕಾಗಿ ಮಾತ್ರವಲ್ಲದೆ, ರಾಷ್ಟ್ರದಇತ್ತೀಚಿನ ಸ್ಥಿತಿಗತಿಯನ್ನು ಪ್ರಸಾರ ಮಾಡುವುದೂ ಅಗತ್ಯವಾಗಿದೆ. ಜೊತೆಗೆ ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯಬೇಕಾಗಿದೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.

ಸುದ್ದಿ ಜಾಲಗಳ ನಿರಂತರ ಕಾರ್ಯಾಚರಣೆಗೆ ಮುದ್ರಣಾಲಯಗಳು, ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ವಿತರಣಾ ಮೂಲಸೌಕರ್ಯಗಳು ನಿರ್ಣಾಯಕವಾಗಿವೆ ಎಂದೂ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.