ADVERTISEMENT

ಎನ್‌ಜಿಟಿ ಮೊರೆ ಹೋಗಲು ‘ಸುಪ್ರೀಂ’ ಸೂಚನೆ

ಬಫರ್ ವಲಯದ ನಿಯಮ ಉಲ್ಲಂಘಿಸಿ ನಿರ್ಮಾಣ:

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 18:36 IST
Last Updated 15 ನವೆಂಬರ್ 2018, 18:36 IST
   

ನವದೆಹಲಿ: ಕೈಕೊಂಡರಹಳ್ಳಿ ಕೆರೆ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯ ನಿರ್ಮಿಸಲು ಹೊರಟಿರುವ ರಿಯಲ್‌ ಎಸ್ಟೇಟ್‌ ಕಂಪನಿಯೊಂದಕ್ಕೆ ನಿಯಮ ಉಲ್ಲಂಘಿಸಿದರೂ ಅಕ್ರಮವಾಗಿ ಅನುಮತಿ ಕಲ್ಪಿಸಲಾಗಿದೆ ಎಂಬ ದೂರಿನ ಕುರಿತು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ (ಎನ್‌ಜಿಟಿ) ಪುನರ್ ಪರಿಶೀಲನಾ ಅರ್ಜಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ.

ನ್ಯೂ ಆರ್ಕ್‌ ಪ್ರಾಜೆಕ್ಟ್‌ ಕಂಪನಿಯು ನಿಯಮ ಗಾಳಿಗೆ ತೂರಿ ಕೆರೆಯ ಬಫರ್ ವಲಯ ವ್ಯಾಪ್ತಿಯಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ಪಡೆದಿದೆ ಎಂದು ದೂರಿ ರಘುಪತಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಎನ್‌ಜಿಟಿ, ಈ ಕುರಿತು ಸಂಬಂಧಿಸಿದ ಪ್ರಾಧಿಕಾರಗಳ ಗಮನ ಸೆಳೆಯಬೇಕು ಎಂದು ಸೂಚಿಸಿ ಕಳೆದ ಆಗಸ್ಟ್‌ 21ರಂದು ಆದೇಶ ನೀಡಿತ್ತು.

ಈ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಂ. ಖನ್ವಿಲ್ಕರ್ ನೇತೃತ್ವದ ಪೀಠವು, ನಿಯಮಗಳ ಉಲ್ಲಂಘನೆಯ ಸಂಪೂರ್ಣ ವಿವರಗಳೊಂದಿಗೆ ಎನ್‌ಜಿಟಿ ಆದೇಶದ ಪುನರ್‌ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

ADVERTISEMENT

ಒಂದೊಮ್ಮೆ ಎನ್‌ಜಿಟಿಯು ಪುನರ್‌ ಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿದಲ್ಲಿ ಸುಪ್ರೀಂ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಲು ಮುಕ್ತ ಅವಕಾಶ ಇದೆ ಎಂದೂ ನ್ಯಾಯಪೀಠ ತಿಳಿಸಿತು.

ನಿರ್ಮಾಣ ಕಾಮಗಾರಿಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿರುವ ನಿರ್ಧಾರ ಸಮರ್ಪಕವಾಗಿಲ್ಲ. ಈ ಸಂಬಂಧ ಜಲ ಮತ್ತು ವಾಯು (ಮಾಲಿನ್ಯ ತಡೆ ಮತ್ತು ನಿಯಂತ್ರಣ) ಕಾಯ್ದೆ, ಬಫರ್ ವಲಯದ ನಿಯಮಗಳನ್ನೂ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲರಾದ ಮೀನಾಕ್ಷಿ ಅರೋರಾ, ಜಗಜಿತ್‌ ಸಿಂಗ್‌ ಛಾಬ್ರಾ ಹಾಗೂ ಈಶಾನ್‌ ಚತುರ್ವೇದಿ ಅವರು ನ್ಯಾಯಪೀಠಕ್ಕೆ ತಿಳಿಸಿದರು.

ಕೈಕೊಂಡರಹಳ್ಳಿ ಕೆರೆಯಿಂದ 320 ಮೀಟರ್ ಅಂತರದಲ್ಲಿನ ಪರಿಸರ ಸೂಕ್ಷ್ಮ ವಲಯದಲ್ಲಿ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ. ಕೆರೆಗೆ ನೀರು ಪೂರೈಸುವ ರಾಜಕಾಲುವೆಯು ಕಾಮಗಾರಿ ನಡೆದಿರುವ ನಿವೇಶನದ ಮೂಲಕವೇ ಹಾದು ಹೋಗಿದೆ ಎಂದು ಅವರು ಹೇಳಿದರು.

ನಿರ್ಮಾಣ ಕಾಮಗಾರಿ ನಡೆದಿರುವ ಈ ಕೃಷಿ ಭೂಮಿಯ ಪರಿವರ್ತನೆ ಪ್ರಕ್ರಿಯೆ ನಡೆದಿಲ್ಲ. ಸಾರ್ವಜನಿಕರ ಆಸ್ತಿಯಾಗಿರುವ ಈ ಕಂದಾಯ ಭೂಮಿಯನ್ನು ಸರ್ಕಾರವೇ ಬಿಬಿಎಂಪಿಗೆ ಹಸ್ತಾಂತರಿಸಿರುವುದೂ ನಿಯಮದ ಉಲ್ಲಂಘನೆಯಾಗಿದೆ ಎಂದೂ ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.