ADVERTISEMENT

ರಾಷ್ಟ್ರೀಯ ಆರೋಗ್ಯ ಅಭಿಯಾನ ಸಿಬ್ಬಂದಿಗಿಲ್ಲ ಉದ್ಯೋಗ ‘ಗ್ಯಾರಂಟಿ’

ವರುಣ ಹೆಗಡೆ
Published 12 ಜುಲೈ 2025, 0:24 IST
Last Updated 12 ಜುಲೈ 2025, 0:24 IST
   

ಬೆಂಗಳೂರು: ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ (ಎನ್‌ಎಚ್‌ಎಂ) ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ‘ಕಾರ್ಯಕ್ಷಮತೆ ಮೌಲ್ಯಮಾಪನ’ ನಾಲ್ಕು ತಿಂಗಳು ಕಳೆದರೂ ಮುಗಿದಿಲ್ಲ. ಇದರಿಂದಾಗಿ ನೌಕರರು ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. 

ಈ ಮೌಲ್ಯಮಾಪನವು ಪ್ರತಿ ವರ್ಷ ಮಾರ್ಚ್ ಅಂತ್ಯಕ್ಕೆ ಕೊನೆಗೊಂಡು, ಅವರ ಕಾರ್ಯಾವಧಿಯನ್ನು ಏಪ್ರಿಲ್ 1ರಿಂದಲೇ ವಿಸ್ತರಿಸಲಾಗುತ್ತಿತ್ತು. ಆದರೆ, ಈ ವರ್ಷ ಈ ಮೌಲ್ಯಮಾಪನದ ಅವಧಿಯನ್ನು ನಿಯಮಿತವಾಗಿ ವಿಸ್ತರಿಸಲಾಗುತ್ತಿದೆ. ಈಗಾಗಲೇ ಮೂರು ಬಾರಿ ಮೌಲ್ಯಮಾಪನದ ಕಾರಣ ನೀಡಿ, ಸಿಬ್ಬಂದಿಯ ಗುತ್ತಿಗೆ ಅವಧಿಯನ್ನು ಅಲ್ಪಾವಧಿಗೆ ವಿಸ್ತರಿಸಲಾಗಿದೆ. ಎನ್ಎಚ್‌ಎಂ ಅಡಿ ಸುಮಾರು 30 ಸಾವಿರ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ಈಗ ಕಾರ್ಯಾವಧಿ ಮುಂದುವರಿಸುವ ಬಗ್ಗೆ ಖಚಿತತೆ ಇಲ್ಲವಾಗಿದ್ದು, ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. 

ನವಜಾತ ಶಿಶುಗಳ ಆರೈಕೆ, ರಾಷ್ಟ್ರೀಯ ಆಂಬುಲೆನ್ಸ್ ಸೇವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಡಿ ಎನ್‌ಎಚ್‌ಎಂ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ನೌಕರರ ಸೇವೆ ತೃಪ್ತಿಕರವಾಗಿದ್ದಲ್ಲಿ ಪ್ರತಿ ವರ್ಷ ಏಪ್ರಿಲ್ ಒಂದರಂದು ಕಡ್ಡಾಯ ರಜೆ ನೀಡಿ, ಮುಂದಿನ ಒಂದು ವರ್ಷದ ಅವಧಿಗೆ ಕಾರ್ಯಾವಧಿಯನ್ನು ವಿಸ್ತರಿಸಲಾಗುತ್ತಿತ್ತು. ಆದರೆ, ಈ ಬಾರಿ ಕಾರ್ಯಕ್ಷಮತೆ ಮೌಲ್ಯಮಾಪನ ಗಡುವು ಮುಗಿದರೂ ಪೂರ್ಣಗೊಳ್ಳದೆ, ಕಾರ್ಯಾವಧಿಯನ್ನು ಮತ್ತೆ ಮತ್ತೆ ವಿಸ್ತರಿಸಲಾಗುತ್ತಿದೆ.

ADVERTISEMENT

38 ಸಾವಿರ ಹುದ್ದೆ ಖಾಲಿ: ನೌಕರರ ಕಾರ್ಯಕ್ಷಮತೆ ಮೌಲ್ಯಮಾಪನ ಸಂಬಂಧ ಎನ್‌ಎಚ್‌ಎಂ ಮುಖ್ಯ ಆಡಳಿತಾಧಿಕಾರಿ ಮಾರ್ಚ್‌ 29 ರಂದು ಸುತ್ತೋಲೆ ಹೊರಡಿಸಿ, ಗುತ್ತಿಗೆ ಸಿಬ್ಬಂದಿ ಅವಧಿಯನ್ನು 15 ದಿನ ವಿಸ್ತರಿಸಿದ್ದರು. ಬಳಿಕ, ಏ.16 ರಿಂದ ಜೂನ್ 30ರವರೆಗೆ ಎರಡನೇ ಬಾರಿ ಅವಧಿ ವಿಸ್ತರಿಸಲಾಗಿತ್ತು. ಜೂನ್.30ರಂದು ಮೂರನೇ ಬಾರಿ ಗುತ್ತಿಗೆ ಅವಧಿ ವಿಸ್ತರಿಸಿ, ಜುಲೈ 31ರವರೆಗೆ ಕಾರ್ಯಾವಧಿ ನಿಗದಿಪಡಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಎನ್‌ಎಚ್‌ಎಂ ಅಡಿ 38 ಸಾವಿರ ಹುದ್ದೆಗಳು ಖಾಲಿ ಉಳಿದಿದ್ದು, ಅಲ್ಪಾವಧಿಗೆ ಗುತ್ತಿಗೆ ಅವಧಿ ವಿಸ್ತರಿಸುತ್ತಿರುವುದು ನೌಕರರ ಕಾರ್ಯಚಟುವಟಿಕೆಗಳ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ. 

‘ಮೌಲ್ಯಮಾಪನದ ಹೆಸರಿನಲ್ಲಿ ಕಡಿಮೆ ಅಂಕ ನೀಡಿ, ಸಿಬ್ಬಂದಿಯನ್ನು ಕೈಬಿಡಲಾಗುತ್ತಿದೆ. ಎನ್‌ಎಚ್‌ಎಂನ ಈ ಕ್ರಮದಿಂದ 15–18 ವರ್ಷಗಳಿಂದ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಅನ್ಯಾಯವಾಗಲಿದೆ. ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅನುಷ್ಠಾನಕ್ಕೂ ತೊಡಕಾಗಲಿದೆ. ಈಗಾಗಲೇ ವೇತನ ವಿಳಂಬದಂತಹ ಸಮಸ್ಯೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದೇವೆ’ ಎಂದು ಎನ್‌ಎಚ್‌ಎಂ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅನಗತ್ಯವಾಗಿ ಯಾರನ್ನೂ ಕೆಲಸದಿಂದ ತೆಗೆಯುವುದಿಲ್ಲ. ಕಾರ್ಯಕ್ಷಮತೆ ಮೌಲ್ಯಮಾಪನವನ್ನು ಮೊದಲಿನಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.
ಅವಿನಾಶ್ ಮೆನನ್, ಎನ್‌ಎಚ್‌ಎಂ ನಿರ್ದೇಶಕ

ನೌಕರರ ಸಂಖ್ಯೆ ಕಡಿತ?

ಕಾರ್ಯಕ್ಷಮತೆ ಮೌಲ್ಯಮಾಪನದ ಆಧಾರದಲ್ಲಿ ಎನ್‌ಎಚ್‌ಎಂ ಸಿಬ್ಬಂದಿಯನ್ನು ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಆರೋಪಗಳೂ ಸಿಬ್ಬಂದಿ ವಲಯದಲ್ಲಿ ಕೇಳಿ ಬಂದಿವೆ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ

ಎನ್‌ಎಚ್‌ಎಂ ಅಡಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 195 ಆಶಾ ಮಾರ್ಗದರ್ಶಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ. ಫಾರ್ಮಾಸಿಸ್ಟ್‌

ಗಳು, ಡಾಟಾ ಎಂಟ್ರಿ ಆಪರೇಟರ್‌ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆಲವರನ್ನು ಬಿಡುಗಡೆಗೊಳಿಸಿ, ಆದೇಶ ಹೊರಡಿಸಲಾಗಿದೆ. ಇದು ಕೂಡ ಎನ್‌ಎಚ್ಎಂ ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ.

‘ಮೌಲ್ಯಮಾಪನದ ಹೆಸರಿನಲ್ಲಿ ಕೆಲಸದಿಂದ ತೆಗೆಯುವ ಪ್ರಕ್ರಿಯೆ ನಡೆಯುತ್ತಿದೆ. ಈ ಕ್ರಮದಿಂದ ಸಾವಿರಾರು ಕುಟುಂಬಗಳು ಬೀದಿಗೆ ಬೀಳಲಿವೆ. ಎನ್‌ಎಚ್‌ಎಂ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸಿಬ್ಬಂದಿಯನ್ನು ಪ್ರಸಕ್ತ ಸಾಲಿಗೆ ಕೆಲಸದಲ್ಲಿ ಮುಂದುವರಿಸುವ ಬಗ್ಗೆ ಕೂಡಲೇ ಆದೇಶ ಹೊರಡಿಸಬೇಕು. ಮೌಲ್ಯಮಾಪನದ ಪ್ರಕ್ರಿಯೆ ರದ್ದುಪಡಿಸಬೇಕು’ ಎಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಶ್ರೀಕಾಂತ್ ಸ್ವಾಮಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.