ADVERTISEMENT

ಹಿಂಸಾಚಾರ ಪ್ರಕರಣ: ಸತತ 2ನೇ ದಿನ ಸಂದೇಶ್‌ಖಾಲಿಗೆ ಭೇಟಿ ನೀಡಿದ NHRC

ಪಿಟಿಐ
Published 24 ಫೆಬ್ರುವರಿ 2024, 7:42 IST
Last Updated 24 ಫೆಬ್ರುವರಿ 2024, 7:42 IST
<div class="paragraphs"><p>ಎನ್‌ಎಚ್‌ಆರ್‌ಸಿ</p></div>

ಎನ್‌ಎಚ್‌ಆರ್‌ಸಿ

   

(ಪ್ರಾತಿನಿಧಿಕ ಚಿತ್ರ)

ಕೋಲ್ಕತ್ತಾ: ಭೂಕಬಳಿಕೆ ಆರೋಪದ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಶನಿವಾರ ಸತತ 2ನೇ ದಿನ ಸಂದೇಶ್‌ಖಾಲಿಗೆ ಭೇಟಿ ನೀಡಿದೆ.

ADVERTISEMENT

ಜೊತೆಗೆ ಮೀನಾಕ್ಷಿ ಮುಖೋಪಾಧ್ಯಾಯ ನೇತೃತ್ವದ ಸಿಪಿಐ(ಎಂ) ನಿಯೋಗವೂ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಿಂಸಾಚಾರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದೆ.

ಮೀನಾಕ್ಷಿ ಅವರು ಪಕ್ಷದ ಮುಖಂಡ ಪಾಲಾಶ್ ದಾಸ್ ಅವರೊಂದಿಗೆ ವಿವಿಧ ಮನೆಗಳಿಗೆ ಭೇಟಿ ನೀಡಿ ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಎಡಿಜಿ (ದಕ್ಷಿಣ ಬಂಗಾಳ) ಸುಪ್ರತಿಮ್ ಸರ್ಕಾರ್ ಕೂಡ ಈ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಏತನ್ಮಧ್ಯೆ, ಬಿಜೆಪಿ ನಾಯಕ ಸುವೆಂದು ಅಧಿಕಾರಿ ಸಂದೇಶ್‌ಖಾಲಿಯಲ್ಲಿನ ಪರಿಸ್ಥಿತಿಯನ್ನು ನಂದಿಗ್ರಾಮಕ್ಕೆ ಹೋಲಿಸಿದ್ದಾರೆ.

ಕೋಲ್ಕತ್ತಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2007-08ರಲ್ಲಿ ಆಗಿನ ಸರ್ಕಾರದ ಬಲವಂತದ ಭೂಸ್ವಾಧೀನದ ವಿರುದ್ಧ ಸಾವಿರಾರು ಸ್ಥಳೀಯರು, ವಿಶೇಷವಾಗಿ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದ್ದರು.

ಸದ್ಯ ಸಂದೇಶ್‌ಖಾಲಿಯಲ್ಲಿ ಪರಿಸ್ಥಿತಿ ನಂದಿಗ್ರಾಮದಂತಿದೆ. ಜನರು ಭೂಕಬಳಿಕೆ, ಮತ ಲೂಟಿ, ಲೈಂಗಿಕ ಕಿರುಕುಳ ಹಾಗೂ ಪ್ರಜಾಪ್ರಭುತ್ವದ ಹತ್ಯೆಯಂತಹ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂದೇಶ್‌ಖಾಲಿಯ ಕೆಲವು ಭಾಗಗಳಲ್ಲಿ ನಿಷೇಧಾಜ್ಞೆ ಇನ್ನೂ ಜಾರಿಯಲ್ಲಿದೆ. ಶೇಖ್ ಶಾಜಹಾನ್ ಮತ್ತು ಅವರ ಸಹೋದರ ಸಿರಾಜುದ್ದೀನ್ ಶೇಖ್ ಸೇರಿದಂತೆ ಸ್ಥಳೀಯ ಟಿಎಂಸಿ ನಾಯಕರು ಭೂಕಬಳಿಕೆ ಮತ್ತು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದ್ದು, ಪ್ರತಿಭಟನೆಗಳು ನಡೆದಿವೆ.

ಘಟನೆ ಬಳಿಕ ಈ ಪ್ರದೇಶಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಷ್ಟ್ರೀಯ ಎಸ್‌ಟಿಎಸ್‌ಸಿ ಆಯೋಗ ಮತ್ತು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರು ಭೇಟಿ ನೀಡಿದ್ದಾರೆ. ಪೊಲೀಸ್ ಮಹಾನಿರ್ದೇಶಕರು ಕೂಡ ಎರಡು ಬಾರಿ ಈ ಪ್ರದೇಶಕ್ಕೆ ಭೇಟಿ ನೀಡಿ ಗ್ರಾಮಸ್ಥರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.