
ನವದೆಹಲಿ: ಅಲ್–ಖೈದಾದ ಸಂಚಿನ ಭಾಗವಾಗಿ ಅಕ್ರಮ ಬಾಂಗ್ಲಾ ವಲಸಿಗರಿಂದ ಭಯೋತ್ಪಾದನಾ ಕೃತ್ಯಕ್ಕೆ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಐದು ರಾಜ್ಯಗಳ 10 ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಈ ಪ್ರಕರಣವನ್ನು 2023ರ ಮೇನಲ್ಲಿ ಭೇದಿಸಿತ್ತು. ನಂತರ ಪ್ರಕರಣವನ್ನು ಅದೇ ವರ್ಷ ಜೂನ್‌ನಲ್ಲಿ ಎನ್‌ಐಎ ವಹಿಸಿಕೊಂಡಿತ್ತು.
ಪಶ್ಚಿಮ ಬಂಗಾಳ, ತ್ರಿಪುರ, ಮೇಘಾಲಯ, ಹರಿಯಾಣ ಮತ್ತು ಗುಜರಾತ್‌ನಲ್ಲಿ ಹಲವು ಶಂಕಿತರು ಮತ್ತು ಅವರ ಸಹಚರರು ಸಂಪರ್ಕ ಹೊಂದಿರುವ ಸ್ಥಳಗಳಲ್ಲಿ ಬುಧವಾರ ಎನ್‌ಐಎ ಅಧಿಕಾರಿಗಳ ತಂಡ ಶೋಧ ನಡೆಸಿವೆ ಎಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.
ಶೋಧದ ಸಮಯದಲ್ಲಿ ತನಿಖಾ ಅಧಿಕಾರಿಗಳು ಹಲವಾರು ಡಿಜಿಟಲ್ ಸಾಧನಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
ಭಾರತವನ್ನು ಅಸ್ಥಿರಗೊಳಿಸುವ ಅಲ್–ಖೈದಾ ಉಗ್ರ ಸಂಘಟನೆಯ ಸಂಚಿನ ಭಾಗವಾಗಿ ಭಾರತದಲ್ಲಿ ನೆಲೆಸಿರುವ ಬಾಂಗ್ಲಾದೇಶ ಪ್ರಜೆಗಳು ಸಂಘಟನೆಯ (ಅಲ್ ಖೈದಾ) ಜೊತೆಗೆ ನಂಟು ಹೊಂದಿದ್ದಾರೆ ಎಂಬ ಆರೋಪದ ಮೇಲೆ 2023ರ ಜೂನ್‌ನಲ್ಲಿ ಎನ್‌ಐಎ ಪ್ರಕರಣ ದಾಖಲಿಸಿಕೊಂಡಿತ್ತು.
ಬಾಂಗ್ಲಾ ಪ್ರಜೆಗಳಾದ ಮೊಹಮ್ಮದ್ ಸೋಜಿಬ್ಮಿಯಾನ್, ಮುನ್ನಾ ಖಾಲಿದ್ ಅನ್ಸಾರಿ , ಅಜರುಲ್ ಇಸ್ಲಾಂ ಮತ್ತು ಅಬ್ದುಲ್ ಲತೀಫ್ ವಿರುದ್ಧ 2023 ನವೆಂಬರ್ 10ರಂದು ಅಹಮದಾಬಾದ್‌ನ ವಿಶೇಷ ನ್ಯಾಯಾಲಯದಲ್ಲಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.
ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಅಲ್–ಖೈದಾದೊಂದಿಗೆ ಇವರು ಸಂಪರ್ಕ ಹೊಂದಿದ್ದಾರೆ. ಹಾಗೂ ನಕಲಿ ದಾಖಲೆಗಳನ್ನು ಬಳಸಿಕೊಂಡು ಭಾರತಕ್ಕೆ ಪ್ರವೇಶಿಸಿದ್ದಾರೆ ಎಂದು ಆರೋಪಿತ್ತು.
ಅಲ್ಲದೇ ಇವರು ಬಾಂಗ್ಲಾದೇಶದ ಅಲ್–ಖೈದಾ ಕಾರ್ಯಕರ್ತರಿಗಾಗಿ ಹಣ ಸಂಗ್ರಹಿಸಿ ವರ್ಗಾವಣೆ ಮಾಡುತ್ತಿದ್ದರು. ಜೊತೆಗೆ ಮುಸ್ಲಿಂ ಯುವಕರನ್ನು ಅಲ್–ಖೈದಾ ಸಿದ್ದಾಂತದೆಡೆಗೆ ಸೆಳೆಯುವಲ್ಲಿ ಸಕ್ರಿಯರಾಗಿದ್ದರು ಎಂದೂ ತನಿಖಾ ಸಂಸ್ಥೆ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.