ADVERTISEMENT

ಪುಲ್ವಾಮಾ ದಾಳಿಗೆ ಬಳಕೆಯಾಗಿದ್ದು ಮಾರುತಿ ಈಕೋ, ಸ್ಫೋಟದ 10 ದಿನ ಹಿಂದಷ್ಟೇ ಖರೀದಿ

ಅನಂತನಾಗ್‌ನ ಸಜ್ಜಾದ್‌

ಏಜೆನ್ಸೀಸ್
Published 26 ಫೆಬ್ರುವರಿ 2019, 4:39 IST
Last Updated 26 ಫೆಬ್ರುವರಿ 2019, 4:39 IST
   

ಶ್ರೀನಗರ: ಪುಲ್ವಾಮಾ ಆತ್ಮಾಹುತಿ ದಾಳಿಯಲ್ಲಿ ಬಳಕೆಯಾಗಿರುವ ಮಾರುತಿ ಇಕೊ ಮಿನಿ ವ್ಯಾನ್‌ನ ಮಾಲೀಕನನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಗುರುತು ಹಿಡಿದಿದೆ. ಫೆ.14ರಂದು ಉಗ್ರ ನಡೆಸಿದ ದಾಳಿಯಲ್ಲಿ 40 ಸಿಆರ್‌ಪಿಎಫ್‌ ಸಿಬ್ಬಂದಿ ಹುತಾತ್ಮರಾದರು.

ಅನಂತನಾಗ್‌ ಜಿಲ್ಲೆಯ ಸಜ್ಜಾದ್‌ ಭಟ್‌ ಜೈಷ್‌–ಎ–ಮೊಹಮ್ಮದ್‌(ಜೆಮ್‌) ಉಗ್ರ ಸಂಘಟನೆ ಸೇರಿದ್ದು, ಬಂದೂಕು ಹಿಡಿದಿರುವ ಆತನ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು. ಅವನು ಬಂಧನದಿಂದ ತಪ್ಪಿಸಿಕೊಂಡು ಅಡಗಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಆತ್ಮಾಹುತಿ ದಾಳಿ ನಡೆಯುವುದಕ್ಕೂ ಕೇವಲ 10 ದಿನ ಮೊದಲು ಸಜ್ಜಾದ್‌ ಕಾರು ಖರೀದಿಸಿದ್ದ.

ಸ್ಫೋಟಕಗಳನ್ನು ತುಂಬಿದ್ದ ಮಾರುತಿ ಈಕೋ ವ್ಯಾನ್‌ನ್ನು ಉಗ್ರ, ಸಿಆರ್‌ಪಿಎಫ್‌ ಸಿಬ್ಬಂದಿ ಸಾಗುತ್ತಿದ್ದ ಬಸ್‌ಗೆ ಡಿಕ್ಕಿ ಮಾಡಿರುವುದಾಗಿ ಎನ್ಐಎ ತನಿಖೆಯಿಂದ ಗೊತ್ತಾಗಿದೆ. ಸ್ಫೋಟದಿಂದ ಛಿದ್ರವಾಗಿದ್ದ ವಾಹನಗಳ ಭಾಗಗಳನ್ನು ಸಂಗ್ರಹಿಸಿ, ವಿಧಿವಿಜ್ಞಾನ ತಜ್ಞರು ಹಾಗೂ ಆಟೊಮೊಬೈಲ್‌ ತಜ್ಞರ ಸಹಕಾರದೊಂದಿಗೆ ಸ್ಫೋಟಕ್ಕೆ ಬಳಕೆ ಮಾಡಲಾದ ವಾಹನವನ್ನು ಪತ್ತೆ ಮಾಡುವಲ್ಲಿ ಎನ್‌ಐಎ ಯಶಸ್ವಿಯಾಗಿದೆ ಎಂದು ಎನ್‌ಐಎ ವಕ್ತಾರ ಹೇಳಿದ್ದಾರೆ.

ADVERTISEMENT

ಚಾಸಿಸ್‌ ಸಂಖ್ಯೆMA3ERLF1SOO183735, ಎಂಜಿನ್‌ ಸಂಖ್ಯೆG12BN164140 ಹೊಂದಿದ್ದಮಾರುತಿ ಈಕೋ ವಾಹನವನ್ನು ಮೊಹಮ್ಮದ್‌ ಜಲೀಲ್‌ ಅಹ್ಮದ್‌ ಹಕಾನಿಗೆ ಮಾರಾಟ ಮಾಡಲಾಗಿತ್ತು. ಅನಂತನಾಗ್‌ನ ಹೆವೆನ್‌ ಕಾಲೋನಿಯ ನಿವಾಸಿಯಾದ ಮೊಹಮ್ಮದ್‌ ಜಲೀಲ್‌ 2011ರಲ್ಲಿ ಕಾರು ಖರೀದಿಸಿದ್ದ. ಈ ಕಾರು ಏಳು ಬಾರಿ ಬೇರೆ ಬೇರೆಯವರ ಕೈಬದಲಾಗಿ(ಮರುಮಾರಾಟ) ಕೊನೆಗೆ ಸಜ್ಜಾದ್‌ ಭಟ್‌ಗೆ ತಲುಪಿದೆ.

ಅನಂತನಾಗ್‌ನ ಬಿಜಬಿಹಾರಾದ ಮೊಹಮ್ಮದ್‌ ಮಕಬೂಲ್‌ ಭಟ್‌ ಪುತ್ರ ಸಜ್ಜಾದ್‌ ಭಟ್‌. ಆತ ಇದೇ ಫೆ.4ರಂದು ವಾಹನ ಖರೀದಿಸಿದ್ದ. ಅವನು ಸಿರಾಜ್‌–ಉಲ್‌–ಉಲೂಮ್‌, ಸೋಫಿಯಾನ್‌ನ ವಿದ್ಯಾರ್ಥಿಯಾಗಿದ್ದಾನೆ.

ಸಜ್ಜಾದ್ ಮನೆಯಲ್ಲಿ ಪತ್ತೆಯಾಗಿಲ್ಲ, ತಪ್ಪಿಸಿಕೊಂಡಿದ್ದಾನೆ ಹಾಗೂ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರ್ಪಡೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಸಜ್ಜಾದ್‌ ಶಸ್ತ್ರಾಸ್ತ್ರಗಳನ್ನು ಹಿಡಿದಿರುವ ಫೋಟೊ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ ಎಂದು ಎನ್ಐಎ ವಕ್ತಾರ ತಿಳಿಸಿದ್ದಾರೆ.

ಎಕೆ 47, ಗ್ರೆನೇಡ್‌ ಹಾಗೂ ಪಿಸ್ತೂಲ್‌ ಹಿಡಿದಿರುವ ಸಜ್ಜಾದ್‌ನ ಚಿತ್ರ ಸೋಮವಾರ ಬೆಳಗಿನಿಂದ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.