ADVERTISEMENT

ಕಾಸರಗೋಡಿನ ಯುವಕರನ್ನು ಐಎಸ್‌ಗೆ ಸೆಳೆದಿದ್ದ ಯುವಕ ತಪ್ಪಿತಸ್ಥ: ಎನ್‌ಐಎ ಕೋರ್ಟ್

ಪಿಟಿಐ
Published 17 ನವೆಂಬರ್ 2021, 16:12 IST
Last Updated 17 ನವೆಂಬರ್ 2021, 16:12 IST
ಸಾಂದರ್ಭಿಕ ಚಿತ್ರ (ಕೃಪೆ– ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ– ಐಸ್ಟಾಕ್)   

ಕೊಚ್ಚಿ: ಕೇರಳದ ಕಾಸರಗೋಡಿನ ಯುವಕರು ಐಎಸ್‌ ಉಗ್ರ ಸಂಘಟನೆ ಸೇರಲು ಕಾರಣನಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚುಕೋರ ನಶೀದುಲ್ ಹಮ್‌ಜಾಫರ್ ತಪ್ಪಿತಸ್ಥ ಎಂದು ಎರ್ನಾಕುಲಂನ ಎನ್‌ಐಎ ವಿಶೇಷ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳು, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿಯಲ್ಲಿ ಹಮ್‌ಜಾಫರ್‌ನನ್ನು ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿರುವುದಾಗಿ ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ತಿಳಿಸಿದೆ.

2016ರ ಮೇ ಹಾಗೂ ಜುಲೈ ಅವಧಿಯಲ್ಲಿ ಕಾಸರಗೋಡಿನ 14 ಮಂದಿ ಯುವಕರು ತಮ್ಮ ಕುಟುಂಬದವರೊಂದಿಗೆ ದೇಶ ತೊರೆದಿದ್ದಲ್ಲದೆ ಐಎಸ್‌ ಸೇರಿದ್ದರು ಎಂದು ಎನ್‌ಐಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆರೋಪಿಗಳಾದ ಅಬ್ದುಲ್ ರಶೀದ್ ಅಬ್ದುಲ್ಲಾ, ಅಶ್ಫಾಕ್ ಮಜೀದ್ ಮತ್ತು ಇತರರ ಜತೆ ಸಂಚು ಹೂಡಿದ್ದ ಹಮ್‌ಜಾಫರ್ ಇರಾನ್‌ಗೆ ಪ್ರಯಾಣಿಸುವುದಕ್ಕೂ ಮುನ್ನ 2017ರ ಅಕ್ಟೋಬರ್ 3ರಂದು ಮಸ್ಕತ್‌ ಹಾಗೂ ಒಮಾನ್‌ಗೆ ತೆರಳಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಲ್ಲಿಂದ ಕಾಬೂಲ್‌ಗೆ ತೆರಳಿದ್ದ ಆತನನ್ನು ಅಫ್ಗಾನಿಸ್ತಾನ ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದವು. 2018ರ ಸೆಪ್ಟೆಂಬರ್‌ನಲ್ಲಿ ಅಫ್ಗಾನಿಸ್ತಾನವು ಆತನನ್ನು ಭಾರತಕ್ಕೆ ಗಡಿಪಾರು ಮಾಡಿದ್ದು, ಬಳಿಕ ಎನ್‌ಐಎ ಬಂಧಿಸಿತ್ತು.

ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ನವೆಂಬರ್ 23ರಂದು ಪ್ರಕಟಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.