ಮುಂಬೈ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಪನ್ವೇಲ್ ರೈಲ್ವೆ ನಿಲ್ದಾಣದಲ್ಲಿ ₹36 ಕೋಟಿ ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡಿರುವ ಭದ್ರತಾ ಸಿಬ್ಬಂದಿಯು, ವಿದೇಶಿ ಮಹಿಳೆಯನ್ನು ಬಂಧಿಸಿದ್ದಾರೆ.
ನೈಜೀರಿಯಾದ ಎಟುಮುಡಾನ್ ಡೋರಿಸ್ ಬಂಧಿತ ಮಹಿಳೆ. ಈಕೆಯಿಂದ 2.002 ಕೆ.ಜಿ ಕೊಕೇನ್ ವಶಪಡಿಸಿಕೊಳ್ಳಲಾಗಿದೆ ಎಂದು ಮಧ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿನ ಮಾದಕ ವಸ್ತು ನಿಯಂತ್ರಣ ಸಂಸ್ಥೆಗೆ (ಎನ್‌ಸಿಬಿ) ದೊರೆತ ಖಚಿತ ಮಾಹಿತಿ ಆಧಾರದಲ್ಲಿ ಪನ್ವೇಲ್‌ನ ಮಧ್ಯ ರೈಲ್ವೆಯ ಆರ್‌ಪಿಎಫ್, ಮುಂಬೈನ ಕುರ್ಲಾದ ಅಪರಾಧ ಗುಪ್ತಚರ ಶಾಖೆಯ (ಸಿಐಬಿ) ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಹಜರತ್ ನಿಜಾಮುದ್ದೀನ್– ಎರ್ನಾಕುಲಂ ನಡುವೆ ಸಂಚರಿಸುವ ಮಂಗಳಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಡ್ರಗ್ಸ್ ಸಾಗಿಸುತ್ತಿರುವ ಖಚಿತ ಮಾಹಿತಿ ದೊರೆಯುತ್ತಿದ್ದಂತೆ ಕಾರ್ಯಾಚರಣೆ ಆರಂಭಿಸಿದ ಅಧಿಕಾರಿಗಳು, ಪನ್ವೇಲ್‌ನ ರೈಲ್ವೆ ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ಶೋಧ ನಡೆಸಿದರು.
ರೈಲಿನ ಎ–2 ಬೋಗಿಯಲ್ಲಿ ಮಗುವಿನೊಂದಿಗಿದ್ದ ಡೋರಿಸ್‌ನನ್ನು ವಶಕ್ಕೆ ಪಡೆದು ಪನ್ವೇಲ್‌ನ ಆರ್‌ಪಿಎಫ್ ಕಚೇರಿಗೆ ಕರೆದೊಯ್ದ ಅಧಿಕಾರಿಗಳು, ಡ್ರಗ್ಸ್ ಪತ್ತೆ ಹಚ್ಚುವ ಸಾಧನಗಳನ್ನು ಬಳಸಿ ಪರಿಶೀಲಿಸಿದಾಗ 2.002 ಕೆ.ಜಿ ಕೊಕೇನ್ ಪತ್ತೆಯಾಗಿದೆ.
ತಿನಿಸಿನ ಎರಡು ಪೊಟ್ಟಣಗಳಲ್ಲಿ ಮೆಥಾಂಫೆಟಮೈನ್ ಎಂದು ಗುರುತಿಸಲಾದ 1,488 ಗ್ರಾಂ ಬಿಳಿ ಸ್ಫಟಿಕದ ಪದಾರ್ಥ ಕಂಡುಬಂದಿದ್ದು ವಶಕ್ಕೆ ಪಡೆಯಲಾಗಿದೆ ಎಂದು ಮಧ್ಯ ರೈಲ್ವೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.