
ಗೋವಾ ಅಗ್ನಿ ದುರಂತ
ಪಣಜಿ: ಬೆಂಕಿ ಅವಘಡದಲ್ಲಿ 25 ಜನರ ಸಾವಿಗೆ ಕಾರಣವಾದ ಉತ್ತರ ಗೋವಾದ ಅರ್ಪೊರಾ ಗ್ರಾಮದಲ್ಲಿರುವ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್ ಕ್ಲಬ್ ಕಟ್ಟಡವನ್ನು ಕೆಡವಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ನೈಟ್ ಕ್ಲಬ್ ಕಟ್ಟಡವನ್ನು ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ. ಬೆಂಕಿ ಅವಘಡಕ್ಕೆ ಸಂಬಂಧಿಸಿದ ಎಲ್ಲ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಕ್ಲಬ್ ಕಟ್ಟಡವನ್ನು ಕೆಡವುವಂತೆ ಮುಖ್ಯಮಂತ್ರಿ ಉತ್ತರ ಗೋವಾದ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ. ಮಂಗಳವಾರವೇ ಈ ಕಟ್ಟಡವನ್ನು ತೆರವುಗೊಳಿಸಲಾಗುತ್ತದೆ’ ಎಂದು ಮುಖ್ಯಮಂತ್ರಿ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಈ ನೈಟ್‌ಕ್ಲಬ್ ಸೌರಭ್ ಹಾಗೂ ಗೌರವ್ ಲೂಥ್ರಾ ಒಡೆತನಕ್ಕೆ ಸೇರಿದ ಮೂರನೇ ಆಸ್ತಿಯಾಗಿದೆ. ಶನಿವಾರ ಬೆಂಕಿ ಅವಘಡ ಸಂಭವಿಸಿದ ಕೆಲವೇ ಗಂಟೆಗಳ ನಂತರ ಇವರಿಬ್ಬರೂ ಥಾಯ್ಲೆಂಡ್‌ಗೆ ಪರಾರಿಯಾಗಿದ್ದಾರೆ. ಇವರನ್ನು ವಶಕ್ಕೆ ಪಡೆಯಲು ಇಂಟರ್‌ಫೋಲ್, ಬ್ಲ್ಯೂಕಾರ್ನರ್ ನೋಟಿಸ್ ಜಾರಿ ಮಾಡಿದೆ’ ಎಂದು ಮುಖ್ಯಮಂತ್ರಿ ಕಚೇರಿಯ ಮೂಲಗಳು ತಿಳಿಸಿವೆ.
ಮತ್ತೊಬ್ಬನ ಬಂಧನ: ಗೋವಾ ನೈಟ್‌ಕ್ಲಬ್ ಬೆಂಕಿ ಅವಘಡ ಪ್ರಕರಣದಲ್ಲಿ ಗೋವಾ ಪೊಲೀಸರು ಕ್ಲಬ್‌ನ ಉದ್ಯೋಗಿ ಭರತ್ ಕೊಯ್ಲಿಯನ್ನು ದೆಹಲಿಯಲ್ಲಿ ಬಂಧಿಸಿ ಗೋವಾಕ್ಕೆ ಕರೆತಂದಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ. ಶನಿವಾರ ಬೆಂಕಿ ದುರಂತದ ನಂತರ ಉತ್ತರ ಗೋವಾದ ಅಂಜುನಾ ಪೊಲೀಸರು ನಾಲ್ವರನ್ನು ಬಂಧಿಸಿದ್ದರು.
‘ಭರತ್ ಕೊಯ್ಲಿಯನ್ನು ಸೋಮವಾರ ನವದೆಹಲಿಯಲ್ಲಿ ವಶಕ್ಕೆ ಪಡೆದು, ಮಂಗಳವಾರ ವಿಮಾನದ ಮೂಲಕ ಗೋವಾಕ್ಕೆ ಕರೆತರಲಾಯಿತು. ನಂತರ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿಯ ಸಬ್ಜಿ ಮಂಡಿ ಪ್ರದೇಶದ ನಿವಾಸಿ ಭರತ್, ನೈಟ್‌ಕ್ಲಬ್‌ನ ನಿತ್ಯದ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲಬ್ ವ್ಯವಸ್ಥಾಪಕರನ್ನು ವಿಚಾರಣೆಗೆ ಒಳಪಡಿಸಿದಾಗ ಇವರ ಹೆಸರು ಹೊರಬಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.