
ಗೋವಾ ನೈಟ್ ಕ್ಲಬ್ ದುರಂತ
ನವದೆಹಲಿ: ಬೆಂಕಿ ದುರಂತದಲ್ಲಿ 25 ಜನರ ಸಾವಿಗೆ ಕಾರಣವಾದ ಗೋವಾದ ‘ಬರ್ಚ್ ಬೈ ರೋಮಿಯೊ ಲೇನ್’ ನೈಟ್ ಕ್ಲಬ್‌ನ ನಾಲ್ವರು ಮಾಲೀಕರಲ್ಲೊಬ್ಬರಾದ ಅಜಯ್ ಗುಪ್ತಾ ಅವರನ್ನು 36 ಗಂಟೆಗಳ ಕಾಲ ಗೋವಾ ಪೊಲೀಸರ ವಶಕ್ಕೆ ನೀಡಲು ದೆಹಲಿ ನ್ಯಾಯಾಲಯ ಬುಧವಾರ ಅನುಮತಿ ನೀಡಿದೆ.
ನೈಟ್ ಕ್ಲಬ್ ಅಗ್ನಿ ದುರಂತ ವಿಚಾರಣೆಗಾಗಿ ಗೋವಾ ಪೊಲೀಸರ್ ಅಜಯ್ ಗುಪ್ತಾ ಅವರನ್ನು ದೆಹಲಿಯಲ್ಲಿ ಬಂಧಿಸಿದ್ದರು. ನಂತರ ಅವರನ್ನು ಹೆಚ್ಚುವರಿ ಮುಖ್ಯ ನ್ಯಾಯಾಧೀಶ ವಿನೋದ್ ಜೋಶಿ ಅವರ ಎದುರು ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡುವಂತೆ ಪೊಲೀಸರು ಮನವಿ ಮಾಡಿದರು.
ಇಂಡಿಗೊ ವಿಮಾನಗಳ ಸಂಚಾರ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯವು 36 ಗಂಟೆಗಳು ವಶಕ್ಕೆ ನೀಡಲು ಅನುಮತಿಸಿತು. ಇದೇ ವೇಳೆ ‘ಗುಪ್ತಾ ಅವರಿಗಿರುವ ಬೆನ್ನು ನೋವು ಮತ್ತು ಇತರ ವೈದ್ಯಕೀಯ ಸಮಸ್ಯೆಗಳನ್ನು ವಿಶೇಷವಾಗಿ ಪರಿಗಣಿಸಬೇಕು ಮತ್ತು ಕಸ್ಟಡಿಯಲ್ಲಿದ್ದಾಗ ಸಕಾಲಿಕ ಔಷಧಿಗಳನ್ನು ಪೂರೈಸಬೇಕು’ ಎಂದು ನ್ಯಾಯಾಧೀಶರು ಸೂಚಿಸಿದ್ದಾರೆ.
ಇದಕ್ಕೂ ಮೊದಲು, ಗೋವಾ ಪೊಲೀಸರು ಗುಪ್ತಾ ಅವರ ಪತ್ತೆಗಾಗಿ ದೆಹಲಿಯಲ್ಲಿ ಹುಡುಕಾಟ ಆರಂಭಿಸಿದ್ದರು. ಪತ್ತೆಯಾಗದ ಕಾರಣ ಅವರ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಲಾಗಿತ್ತು. ಗುಪ್ತಾರನ್ನು ಗೋವಾಕ್ಕೆ ಕರೆತರುವುದಕ್ಕಾಗಿ ನಡೆಯುತ್ತಿರುವ ಔಪಚಾರಿಕ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಅವರನ್ನು ಬಂಧಿಸಸಲಾಗುವುದು’ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.