ADVERTISEMENT

ನಿಮಿಷಾಗೆ ಗಲ್ಲು | ಯೆಮೆನ್‌ ಜೊತೆ ಮುಸ್ಲಿಂ ನಾಯಕರ ಮಾತುಕತೆ; ಚಿಗುರಿದ ಭರವಸೆ

ಪಿಟಿಐ
Published 15 ಜುಲೈ 2025, 9:23 IST
Last Updated 15 ಜುಲೈ 2025, 9:23 IST
<div class="paragraphs"><p>ನಿಮಿಷಾ ಪ್ರಿಯಾ ಮತ್ತು&nbsp;ತಾಯಿ ಪ್ರೇಮಾ ಕುಮಾರಿ</p></div>

ನಿಮಿಷಾ ಪ್ರಿಯಾ ಮತ್ತು ತಾಯಿ ಪ್ರೇಮಾ ಕುಮಾರಿ

   

‌ಚಿತ್ರಕೃಪೆ: ಎಕ್ಸ್‌

ಕೋಯಿಕ್ಕೋಡ್‌: ‘ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಶಿಕ್ಷೆಯಿಂದ ಪಾರು ಮಾಡುವ ನಿಟ್ಟಿನಲ್ಲಿ ಮುಸ್ಲಿಂ ಮುಖಂಡರು ಮಧ್ಯಪ್ರವೇಶಿಸಿದ್ದು, ಅಲ್ಲಿನ ಸರ್ಕಾರದೊಂದಿಗೆ ಕೊನೆ ಕ್ಷಣದ ಪ್ರಯತ್ನ ನಡೆಸಲಾಗಿದೆ.

ADVERTISEMENT

ಸುನ್ನಿ ಸಮುದಾಯದ ಪ್ರಭಾವಿ ಮುಖಂಡ ಕಾಂತಪುರಂ ಎ.ಪಿ. ಅಬೂಬಕರ್‌ ಮುಸ್ಲಿಯಾರ್‌ ಅವರ ನಿರ್ದೇಶನದಂತೆ ಯೆಮೆನ್ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಸೂಫಿ ಮುಖಂಡ ಶೇಖ್ ಹಬೀಬ್‌ ಉಮರ್ ಬಿನ್‌ ಹಫೀಜ್‌ ಅವರು ಮೃತ ತಲಾಲ್‌ ಅಬ್ದೊ ಮಹ್ದಿ ಕುಟುಂಬದೊಂದಿಗೆ ಧಮಾರ್‌ನಲ್ಲಿ ಇಂದು (ಮಂಗಳವಾರ) ಮಾತುಕತೆ ನಡೆಸಲಿದ್ದಾರೆ ಎಂದೆನ್ನಲಾಗಿದೆ.

ಭಾರತದ ಅತ್ಯಂತ ಹಿರಿಯ ಮುಸ್ಲಿಂ ಧಾರ್ಮಿಕ ಅಧಿಕಾರಿ 94 ವರ್ಷದ ಮುಸ್ಲಿಯಾರ್‌ ಶೇಖ್ ಅಬೂಬಕರ್ ಅಹ್ಮದ್‌ ಅವರು ಯೆಮೆನ್‌ನ ಧಾರ್ಮಿಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ನಂತರ ಈ ಪ್ರಕ್ರಿಯೆ ಆರಂಭಗೊಂಡಿದೆ. 

‘ಮೃತ ವ್ಯಕ್ತಿಯ ಸಂಬಂಧಿಯೂ ಆದ ಹೊದಿದಾ ರಾಜ್ಯ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರೂ ಧಮಾರ್‌ನಲ್ಲಿ ನಡೆಯಲಿರುವ ಮಾತುಕತೆಯಲ್ಲಿ ಹಾಜರಾಗಲಿದ್ದಾರೆ ಎಂದು ಕಾಂತಪುರಂ ಕಚೇರಿ ಹೇಳಿದೆ. ಇವರು ಶೇಖ್‌ ಹಬೀಬ್ ಅವರು ಉಮರ್‌ ಅವರ ಅನುಯಾಯಿ ಮತ್ತು ಸೂಫಿ ನಾಯಕನ ಪುತ್ರ ಕೂಡಾ. ಮೃತ ವ್ಯಕ್ತಿಯ ಕುಟುಂಬವನ್ನು ಭೇಟಿ ಮಾಡಿದ ನಂತರ ಅಟಾರ್ನಿ ಜನರಲ್ ಅವರನ್ನೂ ಇವರು ಭೇಟಿ ಮಾಡಲಿದ್ದಾರೆ ಎಂದೆನ್ನಲಾಗಿದೆ.

’ಈ ಎಲ್ಲಾ ಬೆಳವಣಿಗೆಗಳಿಂದ ಮೃತ ವ್ಯಕ್ತಿಯ ಕುಟುಂಬದವರು ಸೂಫಿ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿದ್ದು, ನಿಮಿಷಾ ಮರಣದಂಡನೆಗೆ ತಾತ್ಕಾಲಿಕ ತಡೆ ನೀಡುವ ಸಾಧ್ಯತೆಗಳು ಇವೆ’ ಎಂದೆನ್ನಲಾಗಿದೆ.

‘ಇಂದು (ಮಂಗಳವಾರ) ನಡೆಯಲಿರುವ ಮಾತುಕತೆಯಲ್ಲಿ ಬ್ಲಡ್‌ ಮನಿ (ಸಾವಿಗೆ ಪರಿಹಾರವಾಗಿ ನೀಡುವ ಹಣ) ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ನಡುವೆ ಜುಲೈ 16ರಂದು ನಿಗದಿಯಾಗಿರುವ ನಿಮಿಷಾ ಮರಣದಂಡನೆ ಶಿಕ್ಷೆಗೆ ತಾತ್ಕಾಲಿಕವಾಗಿ ತಡೆ ನೀಡುವಂತೆ ಯೆಮನ್ ಸರ್ಕಾರವನ್ನು ಕಾಂತಪುರಂ ಕೋರಿದ್ದಾರೆ. ಅದೂ ಇಂದು ನಿರ್ಧಾರವಾಗಲಿದೆ’ ಎಂದು ಮೂಲಗಳು ಹೇಳಿವೆ.

ಯೆಮೆನ್‌ನಲ್ಲಿ ಶುಶ್ರೂಷಕಿಯಾಗಿದ್ದ ನಿಮಿಷಾ ಪ್ರಿಯಾ ಅವರು ತಮ್ಮ ವ್ಯವಹಾರ ಪಾಲುದಾರ ಸ್ಥಳೀಯ ಮಹದಿ ಎಂಬುವವರ ಕೊಲೆಯ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿದ್ದಾರೆ. 2020ರಲ್ಲಿ ಇವರ ವಿರುದ್ಧ ನ್ಯಾಯಾಲಯ ಶಿಕ್ಷೆ ಪ್ರಕಟಿಸಿತು. ಶಿಕ್ಷೆ ರದ್ಧತಿ ಕೋರಿ ಸಲ್ಲಿಸಿದ್ದ ಮೇಲ್ಮನವಿಯು 2023ರಲ್ಲಿ ತಿರಸ್ಕೃತಗೊಂಡಿತು. ನಿಮಿಷಾ ಅವರು ಸದ್ಯ ಯೆಮೆನ್‌ನ ರಾಜಧಾನಿ ಸನಾದಲ್ಲಿರುವ ಜೈಲಿನಲ್ಲಿದ್ದಾರೆ.

‘ನಿಮಿಷಾ ಪ್ರಕರಣದಲ್ಲಿ ಹೆಚ್ಚಿನದನ್ನು ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಸೋಮವಾರ ಹೇಳಿದೆ. ಇದರ ಬೆನ್ನಲ್ಲೇ ಅಂತಿಮ ಪ್ರಯತ್ನವೆಂಬಂತೆ ಮುಸ್ಲಿಂ ಮುಖಂಡರು ಮೃತ ಕುಟುಂಬ ಹಾಗೂ ಯೆಮೆನ್ ಸರ್ಕಾರದೊಂದಿಗೆ ಮಾತುಕತೆ ನಡೆಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.