ADVERTISEMENT

‘ನಿರ್ಭಯಾ’ ಪ್ರಕರಣ: ಮರಣದಂಡನೆ ಮುಂದೂಡಿಕೆ?

ಪಿಟಿಐ
Published 15 ಜನವರಿ 2020, 8:55 IST
Last Updated 15 ಜನವರಿ 2020, 8:55 IST
ಸಂತ್ರಸ್ತೆಯ ತಾಯಿ ಮತ್ತು ಆರೋಪಿಗಳು
ಸಂತ್ರಸ್ತೆಯ ತಾಯಿ ಮತ್ತು ಆರೋಪಿಗಳು   

ನವದೆಹಲಿ:ಅಪರಾಧಿಯೊಬ್ಬ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ2012ರ ‘ನಿರ್ಭಯಾ’ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳಿಗೆ ಈ ಹಿಂದೆ ಘೋಷಿಸಿದ್ದಂತೆ ಜ.22ರಂದು ಮರಣದಂಡನೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ದೆಹಲಿ ಸರ್ಕಾರ ಸ್ಪಷ್ಟಪಡಿಸಿದೆ.

ಜೈಲು ನಿಯಮಾವಳಿಗಳನ್ನು ಉಲ್ಲೇಖಿಸಿರುವ ರಾಜ್ಯ ಸರ್ಕಾರವು, ‘ನಾವು ನಿಯಮಗಳಿಗೆ ಬದ್ಧರಾಗಿ ಕೆಲಸ ಮಾಡಬೇಕಾಗುತ್ತದೆ. ಕ್ಷಮಾದಾನ ಅರ್ಜಿ ವಿಲೇವಾರಿಯಾಗುವವರೆಗೆ ಮರಣದಂಡನೆ ಜಾರಿ ಸಾಧ್ಯವಿಲ್ಲ’ ಎಂದು ದೆಹಲಿ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಅಪರಾಧಿಗಳು ಎಂದು ಘೋಷಿಸಿದ್ದ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಮೇ 2017ರಲ್ಲಿ ಸುಪ್ರೀಂ ಕೋರ್ಟ್‌ ಎತ್ತಿಹಿಡಿದಿತ್ತು. ಈ ತೀರ್ಪಿನ ಮರುಪರಿಶೀಲನೆ ಕೋರಿ ಅಪರಾಧಿಗಳು ಸಲ್ಲಿಸಿದ್ದಕ್ಯುರೇಟಿವ್ ಅರ್ಜಿಯನ್ನು (ಮರುಪರಿಶೀಲನಾ ಅರ್ಜಿ) ಸುಪ್ರೀಂ ಕೋರ್ಟ್‌ ಮಂಗಳವಾರವಷ್ಟೇ ವಜಾ ಮಾಡಿತ್ತು.

ADVERTISEMENT

ಕ್ಯುರೇಟಿವ್ ಅರ್ಜಿ ವಜಾಗೊಂಡ ತಕ್ಷಣ ಅಪರಾಧಿಮುಕೇಶ್ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ‘ರಾಷ್ಟ್ರಪತಿಗಳು ಇನ್ನೂ ಅರ್ಜಿ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ನನಗೆ ಡೆತ್ ವಾರಂಟ್ ಜಾರಿ ಮಾಡುವಂತಿಲ್ಲ’ ಎಂದುಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರು ಜಾರಿ ಮಾಡಿದ್ದ ಡೆತ್ ವಾರಂಟ್ ಅನ್ನೂಮುಕೇಶ್ ಪ್ರಶ್ನಿಸಿದ್ದ.

ಮುಕೇಶ್‌ ಪರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ವಕೀಲರಾದ ವೃಂದಾ ಗ್ರೋವರ್, ಒಂದು ವೇಳೆ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದರೂ ನನ್ನಕಕ್ಷಿದಾರನಿಗೆ ಮರಣದಂಡನೆ ಜಾರಿಗೆ 14 ದಿನಗಳ ಕಾಲಾವಕಾಶ ಕೊಡಬೇಕು ಎಂದು ಕೋರಿದ್ದರು.

ಈ ಹಿಂದೆ ನಿಗದಿಯಾಗಿದ್ದಂತೆ ‘ನಿರ್ಭಯ’ ಪ್ರಕರಣದ ಅಪರಾಧಿಗಳಾದ ಮುಕೇಶ್‌ ಸಿಂಗ್, ಪವನ್ ಗುಪ್ತ, ವಿನಯ್ ಶರ್ಮಾ ಮತ್ತು ಅಕ್ಷಯ್ ಸಿಂಗ್‌ ಅವರಿಗೆ ಜ.22ರ ಬೆಳಿಗ್ಗೆ 7 ಗಂಟೆಗೆ ಮರಣದಂಡನೆ ಜಾರಿ ಮಾಡಬೇಕಿತ್ತು.

ಡಿಸೆಂಬರ್ 2012ರಲ್ಲಿ ಐವರು ಪುರುಷರು ಮತ್ತು ಓರ್ವ ಬಾಲಾಪರಾಧಿ ದೆಹಲಿಯ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತೆಯು ನಂತರದ ದಿನಗಳಲ್ಲಿ ಮೃತಪಟ್ಟಿದ್ದಳು. ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ಓರ್ವ ಆರೋಪಿಯು ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ, ಬಾಲಾಪರಾಧಿಯನ್ನು ಸುಧಾರಣಾ ಗೃಹಕ್ಕೆ ಕಳುಹಿಸಲಾಗಿತ್ತು. ನಂತರದ ದಿನಗಳಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.