ADVERTISEMENT

ಅನುದಾನ ಬಿಡುಗಡೆಯಲ್ಲಿ ತಾರತಮ್ಯ: ಲೋಕಸಭೆಯಲ್ಲಿ ನಿರ್ಮಲಾ, ಅಧೀರ್ ಏಟು–ಎದಿರೇಟು

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 0:30 IST
Last Updated 6 ಫೆಬ್ರುವರಿ 2024, 0:30 IST
<div class="paragraphs"><p>ನಿರ್ಮಲಾ ಸೀತಾರಾಮನ್‌ ಮತ್ತು ಅಧೀರ್‌ ರಂಜನ್‌ ಚೌಧರಿ</p></div>

ನಿರ್ಮಲಾ ಸೀತಾರಾಮನ್‌ ಮತ್ತು ಅಧೀರ್‌ ರಂಜನ್‌ ಚೌಧರಿ

   

ನವದೆಹಲಿ: ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ಅಧೀರ್‌ ರಂಜನ್‌ ಚೌಧರಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ನಡುವೆ ಸೋಮವಾರ ನಡೆದ ಜಟಾಪಟಿಯ ವಿವರ ಇಲ್ಲಿದೆ.

ಅಧೀರ್: ಸಂವಿಧಾನದ ಪ್ರಕಾರವೇ ಜಿಎಸ್‌ಟಿ ಸೇರಿದಂತೆ ಎಲ್ಲ ತೆರಿಗೆ ಪಾಲುಗಳನ್ನು ಹಂಚಬೇಕಿದೆ. ನೀವು ಸಾಂವಿಧಾನಿಕ ಆದೇಶಕ್ಕೆ ಬದ್ಧವಾಗಿರಬೇಕು. ಬಿಜೆಪಿಯೇತರ ರಾಜ್ಯಗಳು ತಮ್ಮ ನ್ಯಾಯಬದ್ಧ ಪಾಲಿನಿಂದ ವಂಚಿತವಾಗುತ್ತಿವೆ ಎಂಬ ಭಾವನೆ ರಾಷ್ಟ್ರದಾದ್ಯಂತ ಹೆಚ್ಚುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ, ಕರ್ನಾಟಕ ಸರ್ಕಾರವೇ ದೆಹಲಿಯಲ್ಲಿ ಧರಣಿ ನಡೆಸಲು ತೀರ್ಮಾನಿಸಿದೆ. ಕೇಂದ್ರ ಸರ್ಕಾರವು ತಾರತಮ್ಯದಿಂದ ಕಾರ್ಯನಿರ್ವಹಿಸುತ್ತಿದೆ ಎಂಬುದು ಕರ್ನಾಟಕದ ಆರೋಪ. ಇದಕ್ಕೆ ಕಾರಣವೇನು?

ADVERTISEMENT

ನಿರ್ಮಲಾ: ಹಣಕಾಸು ಆಯೋಗದ ಶಿಫಾರಸಿನ ‍ಪ್ರಕಾರ ರಾಜ್ಯಗಳಿಗೆ ತೆರಿಗೆ ಪಾಲನ್ನು ಬಿಡುಗಡೆ ಮಾಡಲಾಗುತ್ತದೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ ಎಸ್‌ಜಿಎಸ್‌ಟಿಯು ಸಂಪೂರ್ಣವಾಗಿ ರಾಜ್ಯಗಳಿಗೆ ಹೋಗುತ್ತದೆ. ಐಜಿಎಸ್‌ಟಿ ಕೇಂದ್ರಕ್ಕೆ ಸೇರುತ್ತದೆ. ಇದರಲ್ಲಿ ಬಹಳಷ್ಟು ಅಂತರರಾಜ್ಯ ಪಾವತಿ ಇರುತ್ತದೆ. ಇದನ್ನು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ನಿಯಮಿತವಾಗಿ ಪರಾಮರ್ಶೆ ನಡೆಸಲಾಗುತ್ತದೆ. ಹಣಕಾಸು ಆಯೋಗದ ಸಲಹೆಯಂತೆ ಸಿಜಿಎಸ್‌ಟಿಯನ್ನು ವಿಂಗಡಿಸಲಾಗಿದೆ. ರಾಜ್ಯಗಳಿಗೆ ತೆರಿಗೆ ಪಾಲು ಹಾಗೂ ಅನುದಾನ ಹಂಚಿಕೆಯೂ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ. ರಾಜ್ಯಗಳ ಪಾಲನ್ನು ಹಣಕಾಸು ಆಯೋಗ ನಿಗದಿ ಮಾಡಿದೆ. ಆಯೋಗವು ಎಲ್ಲ ರಾಜ್ಯಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರಗಳ ಜತೆಗೆ ಸಮಾಲೋಚನೆ ನಡೆಸಿದ ನಂತರವೇ ವರದಿ ಸಲ್ಲಿಸಿದೆ. ಆ ಪ್ರಕಾರವೇ, ಅನುದಾನ ಬಿಡುಗಡೆಯಾಗುತ್ತಿದೆ.

ನಿರ್ದಿಷ್ಟ ರಾಜ್ಯವೊಂದನ್ನು ಇಷ್ಟಪಡುತ್ತೇನೆ ಅಥವಾ ರಾಜ್ಯವೊಂದರಲ್ಲಿ ರಾಜಕೀಯ ವಿರೋಧಿ ಪಕ್ಷವೊಂದು ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ನನ್ನ ಇಚ್ಛೆಗೆ ಅನುಸಾರ ತೀರ್ಮಾನ ತೆಗೆದುಕೊಳ್ಳಲು ಆಗದು. ನಾನು ಈ ಕೆಲಸವನ್ನು ಮಾಡಿಯೂ ಇಲ್ಲ. ಆ ಹಕ್ಕು ನನಗೆ ಇಲ್ಲ. ಹಣಕಾಸು ಆಯೋಗದ ಶಿಫಾರಸುಗಳನ್ನು ಶೇ 100ರಷ್ಟು ಅನುಸರಿಸಲೇಬೇಕು. ಎಲ್ಲ ಹಣಕಾಸು ಸಚಿವರು ಇದನ್ನೇ ಮಾಡಿದ್ದಾರೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪ ರಾಜಕೀಯ ಪ್ರೇರಿತ. ಇದನ್ನು ವಿಷಾದದಿಂದಲೇ ಹೇಳುತ್ತಿದ್ದೇನೆ. ಯಾವುದೇ ಹಣಕಾಸು ಸಚಿವರು ಮಧ್ಯಪ್ರವೇಶಿಸಿ ‘ನನಗೆ ಈ ರಾಜ್ಯ ಇಷ್ಟವಿಲ್ಲ. ಹಣ ಪಾವತಿ ಸ್ಥಗಿತಗೊಳಿಸಿ’ ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ.

ಅಧೀರ್‌: ನೀವ್ಯಾಕೆ ರಾಜ್ಯ ಸರ್ಕಾರಗಳೊಂದಿಗೆ ನೇರವಾಗಿ ಮಾತನಾಡಬಾರದು?

ನಿರ್ಮಲಾ: ಕರ್ನಾಟಕದ ವಿಷಯದಲ್ಲಿ ಆರು ತಿಂಗಳ ಹಿಂದಿನವರೆಗೆ ಎಲ್ಲವೂ ಚೆನ್ನಾಗಿತ್ತು ಹಾಗೂ ಈಗ ಸಮಸ್ಯೆಯಾಗಿದೆ ಎಂದು ಅಧೀರ್‌ ಪ್ರಸ್ತಾಪಿಸಿದ್ದಾರೆ. ಎಲ್ಲಿ ತಪ್ಪಾಗಿದೆ ಎಂಬುದರ ಕುರಿತು ನೀವೇ ಪರಾಮರ್ಶೆ ನಡೆಸಿ. ಖರ್ಚು ಮಾಡಬಾರದ ವಸ್ತುಗಳ ಮೇಲೆಲ್ಲ ಖರ್ಚು ಮಾಡಲು ಆರಂಭಿಸಿದ್ದೀರಾ. ಇದನ್ನು ನಾನು ಪ್ರಶ್ನಿಸುವುದಿಲ್ಲ. ಖರ್ಚು ಮಾಡಿ. ಆದರೆ, ನಮ್ಮ ಮೇಲೆ ಆರೋಪ ಮಾಡಬೇಡಿ. ನಿಯಮದ ಪ್ರಕಾರವೇ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ನಿಮ್ಮ ಬಜೆಟ್‌ನ ಹಣವನ್ನು ಸಮರ್ಥನೀಯವಲ್ಲದ ಕ್ಷೇತ್ರಗಳಿಗೆ ಖರ್ಚು ಮಾಡುತ್ತಿದ್ದರೆ, ಅದಕ್ಕೆ ನಾನು ಜವಾಬ್ದಾರಳಲ್ಲ. ಆತ್ಮಾವಲೋಕನ ಮಾಡಿಕೊಳ್ಳಿ. 

ಹಣಕಾಸು ಆಯೋಗದವರು ರಾಜ್ಯಕ್ಕೆ ಬಂದಾಗ ನಿಮ್ಮ ಅವಶ್ಯಕತೆಗಳನ್ನು ಹಾಗೂ ಬೇಡಿಕೆಗಳನ್ನು ತಿಳಿಸಿ. ನಿಮ್ಮ ಸ್ಥಿತಿಯನ್ನು ಮನವರಿಕೆ ಮಾಡಿಕೊಡಿ. ಹಣಕಾಸು ಆಯೋಗವೇ ಅದನ್ನು ಸರಿಪಡಿಸಲಿ. ಅದು ಸಾಂವಿಧಾನಿಕ ಸಂಸ್ಥೆ. 

ಅಧೀರ್: ನೀವ್ಯಾಕೆ ಸಭೆ ಕರೆಯಬಾರದು?

ನಿರ್ಮಲಾ: ಕರ್ನಾಟಕದ ಸಚಿವರೊಂದಿಗೆ ಕುಳಿತು ಸಮಾಲೋಚನೆ ನಡೆಸಿದ್ದೇನೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನನ್ನನ್ನು ಭೇಟಿ ಮಾಡಿ ಕಷ್ಟಗಳನ್ನು ಹೇಳಿಕೊಂಡರು. ಅವರಿಗೆ ವಾಸ್ತವಿಕ ಉತ್ತರ ನೀಡಿದ್ದೇನೆ. 

ಅಧೀರ್: ನೀವು ಕಷ್ಟಗಳನ್ನು ಕೇಳುತ್ತೀರಿ. ಆದರೆ, ಏನೂ ಮಾಡುತ್ತಿಲ್ಲ. ಇದೇ ಸಮಸ್ಯೆ.

ನಿರ್ಮಲಾ: ಹಣಕಾಸು ಆಯೋಗ ಶಿಫಾರಸು ಮಾಡದೆ ನಾನು ಏನನ್ನೂ ಮಾಡಲು ಸಾಧ್ಯವಿಲ್ಲ. ನನಗೆ ವಿವೇಚನಾಧಿಕಾರ ಇಲ್ಲ. ಆಯೋಗದ ಶಿಫಾರಸಿನಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಇಲ್ಲ. ದಯವಿಟ್ಟು ಹಣಕಾಸು ಆಯೋಗದೊಂದಿಗೆ ಚರ್ಚಿಸಿ.

ಅಧೀರ್: ನೀವು ಔದಾರ್ಯ ತೋರಿ ಎಂದು ನಾವು ಕೇಳುತ್ತಿಲ್ಲ.

ನಿರ್ಮಲಾ: ನಾನು ಔದಾರ್ಯದ ಕುರಿತು ಮಾತನಾಡುತ್ತಿಲ್ಲ. ಹಣಕಾಸು ಆಯೋಗದ ಶಿಫಾರಸಿನ ಬಗ್ಗೆಯಷ್ಟೇ ಮಾತನಾಡಿದ್ದೇನೆ. ಆಯೋಗದ ಶಿಫಾರಸಿನ ಪ್ರಕಾರವೇ ನಡೆದುಕೊಳ್ಳುತ್ತಿದ್ದೇನೆ. ರಾಜ್ಯಗಳಿಗೆ ಭೇಟಿ ನೀಡಿ ಎಂದು ಅಧೀರ್ ಸಲಹೆ ನೀಡಿದ್ದಾರೆ. ನಾನು ರಾಜ್ಯಗಳಿಗೆ ಭೇಟಿ ಕೊಟ್ಟಿದ್ದೇನೆ. ನಾನೇನೂ ಮಾಡಿಲ್ಲ ಎಂಬುದು ಅವರ ಆರೋಪ. ನಾನು ಏನೂ ಮಾಡಲು ಸಾಧ್ಯವಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.