ADVERTISEMENT

ಉತ್ತಮ ವಿಪಕ್ಷ ನಾಯಕರ ಅಗತ್ಯವಿದೆ: ಕಾಂಗ್ರೆಸ್ ವಿರುದ್ಧ ನಿರ್ಮಲಾ ವಾಗ್ದಾಳಿ

ಜಿಎಸ್‌ಟಿ: ಸರ್ಕಾರವನ್ನು ಟೀಕಿಸಿದ ಕಾಂಗ್ರೆಸ್ ವಿರುದ್ಧ ನಿರ್ಮಲಾ ವಾಗ್ದಾಳಿ

ಪಿಟಿಐ
Published 6 ಸೆಪ್ಟೆಂಬರ್ 2025, 14:40 IST
Last Updated 6 ಸೆಪ್ಟೆಂಬರ್ 2025, 14:40 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸರಳೀಕರಣ ನಿರ್ಧಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್‌ ಸೇರಿದಂತೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ‘ಭಾರತಕ್ಕೆ ಉತ್ತಮ ವಿಪಕ್ಷ ನಾಯಕರ ಅಗತ್ಯವಿದೆ’ ಎಂದಿದ್ದಾರೆ.

‘ಭಾರತವು ಒಳ್ಳೆಯ ವಿಪಕ್ಷವನ್ನು ಹೊಂದಲು ಅರ್ಹವಾಗಿದೆ ಎಂಬುದನ್ನು ನಾನು ಬಲವಾಗಿ ನಂಬುತ್ತೇನೆ. ಭಾರತಕ್ಕೆ ಉತ್ತಮ ವಿರೋಧ ಪಕ್ಷದ ನಾಯಕರ ಅಗತ್ಯವಿದೆ. ಇಂತಹ ಅಪ್ರಬುದ್ಧ ಹೇಳಿಕೆಗಳು ಯಾವುದೇ ಪ್ರಯೋಜನ ನೀಡದು’ ಎಂದು ಶನಿವಾರ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಟೀಕಿಸಿದ್ದಾರೆ.

ಜಿಎಸ್‌ಟಿ ಸರಳೀಕರಣ ನಿರ್ಧಾರವನ್ನು ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಘೋಷಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಸಂಸ್ಥೆಯಾಗಿರುವ ಜಿಎಸ್‌ಟಿ ಮಂಡಳಿಯ ಶಕ್ತಿಗುಂದಿಸಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌ ಮಾಡಿರುವ ಆರೋಪವನ್ನು ಅವರು ಅಲ್ಲಗಳೆದರು.

ADVERTISEMENT

‘ತೆರಿಗೆ ವ್ಯವಸ್ಥೆಯಲ್ಲಿನ ಸುಧಾರಣೆಗಳ ಕುರಿತು ದೇಶದ ಪ್ರಧಾನಿಯಾಗಿ ಮೋದಿ ಅವರು ಹೇಳಿಕೆ ನೀಡಿರುವುದರಲ್ಲಿ ತಪ್ಪೇನಿದೆ’ ಎಂದು ನಿರ್ಮಲಾ ಪ್ರಶ್ನಿಸಿದರು.

‘2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಾಗ ನಾಲ್ಕು ತೆರಿಗೆ ಹಂತಗಳನ್ನು ನಿಗದಿಪಡಿಸಿದ್ದಕ್ಕೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ದೂಷಿಸುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದರು.

‘ಜಿಎಸ್‌ಟಿ ಜಾರಿಯಲ್ಲಿ ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳು ಕೂಡಾ ಪ್ರಮುಖ ಪಾತ್ರ ವಹಿಸಿದ್ದವು. ಕಾಂಗ್ರೆಸ್‌ನವರಿಗೆ ಜಿಎಸ್‌ಟಿ ಇತಿಹಾಸದ ಬಗ್ಗೆ ತಿಳಿವಳಿಕೆಯಿಲ್ಲದಿದ್ದರೆ, ಮೌನವಾಗಿರುವುದು ಒಳಿತು’ ಎಂದರು.

‘ಜಿಎಸ್‌ಟಿ ಜಾರಿ ಸಂದರ್ಭದಲ್ಲಿ ನಾಲ್ಕು ತೆರಿಗೆ ಹಂತಗಳನ್ನು ಇಡಬೇಕೆಂಬ ತೀರ್ಮಾನವನ್ನು ವಿವಿಧ ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿಯು ತೆಗೆದುಕೊಂಡಿತ್ತು. ಬಿಜೆಪಿ ಅಥವಾ ಅಂದಿನ ಹಣಕಾಸು ಸಚಿವ ಅರುಣ್‌ ಜೇಟ್ಲಿ ತೆಗೆದುಕೊಂಡ ನಿರ್ಧಾರ ಆಗಿರಲಿಲ್ಲ’ ಎಂಬುದನ್ನು ನೆನಪಿಸಿದರು.

‘ನಾನು ತಪ್ಪು ಹೇಳುತ್ತಿದ್ದೇನೆ ಎಂಬುದನ್ನು ವಿಪಕ್ಷಗಳ ನಾಯಕರು ಸಾಬೀತುಪಡಿಸಿದರೆ ಜನರ ಕ್ಷಮೆ ಯಾಚಿಸಲು ಯಾವುದೇ ಹಿಂಜರಿಕೆಯಿಲ್ಲ. ವಿರೋಧ ಪಕ್ಷದವರು ಹೇಳುತ್ತಿರುವುದು ಅಸಂಬದ್ಧ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ವಿಪಕ್ಷಗಳ ನಾಯಕರು ಅಪ್ರಬುದ್ಧ ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಅವರು ದೇಶಕ್ಕೆ ಹಾನಿ ಮಾಡುತ್ತಿದ್ದಾರೆಯೇ ಹೊರತು ದೇಶಕ್ಕೆ ಸೇವೆ ಸಲ್ಲಿಸುತ್ತಿಲ್ಲ
ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆ

ಆರ್ಥಿಕತೆಗೆ ಉತ್ತೇಜನ: ವೈಷ್ಣವ್

ಜಿಎಸ್‌ಟಿ ಸರಳೀಕರಣವು ಸಾಮಾನ್ಯ ಜನರಿಗೆ ಪ್ರಯೋಜನ ಉಂಟುಮಾಡುವುದರ ಜತೆಯಲ್ಲೇ ಭಾರತದ ಆರ್ಥಿಕತೆಗೆ ಉತ್ತೇಜನ ನೀಡಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಶನಿವಾರ ಪ್ರತಿಪಾದಿಸಿದರು. ಕಾಂಗ್ರೆಸ್‌ ಆಡಳಿತ ಅವಧಿಯಲ್ಲಿ ಜನರ ಮೇಲೆ ‘ಭಾರಿ ತೆರಿಗೆಯ ಹೊರೆ’ ಇತ್ತು ಎಂದು ಅವರು ಆರೋಪಿಸಿದರು. ‘ತೆರಿಗೆ ವ್ಯವಸ್ಥೆಯಲ್ಲಿನ ಸುಧಾರಣೆಯು ದೇಶದ 140 ಕೋಟಿ ಜನರ ಜೀವನದಲ್ಲಿ ನಿರಾಳ ಭಾವ ಮೂಡಿಸಿದೆ. 2014ಕ್ಕಿಂತ ಮೊದಲು (ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ) ಪ್ರತಿಯೊಂದು ವಸ್ತುವಿನ ಮೇಲೆ ವಿಧಿಸಲಾದ ವಿವಿಧ ರೀತಿಯ ತೆರಿಗೆಗಳಿಂದ ಜನಸಾಮಾನ್ಯರ ಮೇಲೆ ದೊಡ್ಡ ಹೊರೆ ಇತ್ತು’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.