ADVERTISEMENT

1.5 ಲಕ್ಷ ಆರೋಗ್ಯ ಕೇಂದ್ರ ಸ್ಥಾಪನೆ: ನೀತಿ ಆಯೋಗ

ಪಿಟಿಐ
Published 20 ಡಿಸೆಂಬರ್ 2018, 19:46 IST
Last Updated 20 ಡಿಸೆಂಬರ್ 2018, 19:46 IST

ನವದೆಹಲಿ: ಆಯುಷ್ಮಾನ್ ಭಾರತ ಯೋಜನೆ ಅಡಿಯಲ್ಲಿ ದೇಶದಾದ್ಯಂತ 1.5 ಲಕ್ಷ ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳನ್ನು ತ್ವರಿತವಾಗಿ ಸ್ಥಾಪಿಸಲು ನೀತಿ ಆಯೋಗ ಮುಂದಾಗಿದೆ. 2022–23ರ ವೇಳೆಗೆ ಇವು ಕಾರ್ಯಾರಂಭ ಮಾಡಲಿದ್ದು, ಇದರಿಂದ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯ ವ್ಯಾಪ್ತಿ ವಿಸ್ತಾರವಾಗಲಿದೆ.

ಸೋಂಕುರಹಿತ ರೋಗಗಳು, ಮಾನಸಿಕ ಆರೋಗ್ಯ ಸಂಬಂಧಿ ವಿಷಯಗಳು, ವಯೋಸಹಜ ಅನಾರೋಗ್ಯಕ್ಕೆ ಚಿಕಿತ್ಸೆ ನೀಡುವ ಸೇವೆಗಳನ್ನು ಒದಗಿಸಬೇಕು ಎಂದು ‘ಸ್ಟ್ರಾಟೆಜಿ ಫಾರ್ ನ್ಯೂ ಇಂಡಿಯಾ @75’ ವರದಿಯಲ್ಲಿ ಆಯೋಗ ಉಲ್ಲೇಖಿಸಿದೆ.

‘ಬ್ರಿಟನ್, ಆಸ್ಟ್ರೇಲಿಯಾ, ಕೆನಡಾ ಹಾಗೂ ಸ್ವೀಡನ್‌ನಂತಹಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಪ್ರಾಥಮಿಕ ಆರೋಗ್ಯ ವಲಯಕ್ಕೆ ಹೆಚ್ಚಿನ ಬಜೆಟ್ ವಿನಿಯೋಗಿಸಲಾಗುತ್ತದೆ. ಭಾರತದಲ್ಲಿ ಪ್ರಸ್ತುತಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನೀಡುತ್ತಿರುವ ಪ್ರಾಮುಖ್ಯತೆ ಸೀಮಿತವಾಗಿದೆ. ಉತ್ತಮ ವ್ಯವಸ್ಥೆ ಹೊಂದಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಾಕಷ್ಟು ಸೌಲಭ್ಯಗಳಿಲ್ಲ. ರಾಷ್ಟ್ರೀಯ ಆರೋಗ್ಯ ಯೋಜನೆಗಳಿಗೆ ಸಂಬಂಧಿಸಿದ ಸೇವೆಗಳು ಇಲ್ಲಿ ದೊರಕುವಂತಾಗಬೇಕು’ ಎಂದು ವರದಿಯಲ್ಲಿ ಹೇಳಲಾಗಿದೆ.

ADVERTISEMENT

ಔಷಧ ಮತ್ತು ವೈದ್ಯಕೀಯ ಉಪಕರಣಗಳು ಕೈಗೆಟಕುವ ದರದಲ್ಲಿ ದೊರಕುವಂತಾಗಬೇಕು ಎಂದು ಆಯೋಗ ಇದೇ ವೇಳೆ ಅಭಿಪ್ರಾಯಪಟ್ಟಿದೆ.

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ನೀಡಲಾಗುವ ಅನುದಾನವನ್ನು ಬಳಕೆ ಮಾಡಲು ಸಾರ್ವಜನಿಕ ಆಸ್ಪತ್ರೆಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕು ಎಂದೂ ಆಯೋಗ ಶಿಫಾರಸು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.