ADVERTISEMENT

ಪಣಜಿ | ಬೂತ್‌ ಮಟ್ಟದಲ್ಲಿ ಶೇ 50ರಷ್ಟು ಮತ ಪಡೆಯುವ ಗುರಿ: ನಿತಿನ್‌ ನವೀನ್‌

ಪಿಟಿಐ
Published 31 ಜನವರಿ 2026, 15:12 IST
Last Updated 31 ಜನವರಿ 2026, 15:12 IST
<div class="paragraphs"><p>ಗೋವಾದ ಪಣಜಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಬಂದ ಬಿಜೆಪಿ ಅಧ್ಯಕ್ಷ ನಿತಿನ್‌ ನವೀನ್‌ ಅವರನ್ನು ಪುಷ್ಪ ಅರ್ಪಿಸಿ ಸ್ವಾಗತಿಸಲಾಯಿತು </p></div>

ಗೋವಾದ ಪಣಜಿಯಲ್ಲಿ ಶನಿವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಬಂದ ಬಿಜೆಪಿ ಅಧ್ಯಕ್ಷ ನಿತಿನ್‌ ನವೀನ್‌ ಅವರನ್ನು ಪುಷ್ಪ ಅರ್ಪಿಸಿ ಸ್ವಾಗತಿಸಲಾಯಿತು

   

– ಪಿಟಿಐ ಚಿತ್ರ 

ಪಣಜಿ: ಬೂತ್‌ ಮಟ್ದದಿಂದ ರಾಜ್ಯ ಮಟ್ಟದವರೆಗೆ ಪಕ್ಷದ ಸಂಘಟನೆಯನ್ನು ಬಲಿಷ್ಠಗೊಳಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್‌ ನವೀನ್‌, ‘2027ರಲ್ಲಿ ನಡೆಯುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲಿ ಕನಿಷ್ಠ ಶೇಕಡ 50ರಷ್ಟು ಮತಗಳನ್ನು ಪಡೆಯುವ ಗುರಿಯೊಂದಿಗೆ ಕಾರ್ಯನಿರ್ವಹಿಸಬೇಕು’ ಎಂದರು.

ADVERTISEMENT

ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, 2027ರ ಚುನಾವಣೆಯು ‘ವಿಕಸಿತ ಗೋವಾ’ದ ದೂರದೃಷ್ಟಿ ಸಾಧನೆಗೆ ಅತ್ಯಂತ ಮಹತ್ವದ್ದಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಸ್ಥಿರ ಸರ್ಕಾರ ಮುಂದುವರಿಯಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಪಕ್ಷದ ಸಂಘಟನೆಯಲ್ಲಿ ಬೂತ್‌ ಹಂತದ ಮುಖ್ಯಸ್ಥರದ್ದು ಮಹತ್ವದ ಪಾತ್ರ. ತಳಮಟ್ಟದಲ್ಲಿ ಜನರ ಬೆಂಬಲ ಪಡೆಯುವ ಮೂಲಕ ಅವರು ಪಕ್ಷವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ಅವರು ಹೇಳಿದರು.

ಬಿಜೆಪಿ ಕೇಡರ್‌ ಆಧಾರಿತ ಪಕ್ಷವಾಗಿದ್ದು, ಬೂತ್‌ ಮಟ್ಟದ ಅಧ್ಯಕ್ಷರು ಮುಖ್ಯಮಂತ್ರಿ, ಪ್ರಧಾನಿ ಸೇರಿದಂತೆ ಅತ್ಯುನ್ನತ ನಾಯಕತ್ವದ ಹುದ್ದೆಗಳನ್ನು ಅಲಂಕರಿಸಲು ಅವಕಾಶಗಳಿವೆ ಎಂದರು.

‘ಗ್ರಾಮೀಣ ಮತ್ತು ಬಡ ಜನರು ಬಲಿಷ್ಠವಾದರೆ ಬಿಜೆಪಿ ಬಲಿಷ್ಠವಾಗುತ್ತದೆ. ಇದು ಕ್ರಮೇಣ ರಾಜ್ಯ ಮತ್ತು ದೇಶದ ಪ್ರಗತಿಗೂ ಕಾರಣವಾಗುತ್ತದೆ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ನಂಬಿಕೆ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಿದೆ’ ಎಂದು ಅವರು ಕರೆ ನೀಡಿದರು. 

ಗೋವಾದ ಜನರ ತಲಾ ಆದಾಯವು 2014ರಲ್ಲಿ ₹1.12 ಲಕ್ಷ ಇತ್ತು. ಅದು 2023–24ರ ವೇಳೆಗೆ ₹3 ಲಕ್ಷಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮೂಲಸೌಕರ್ಯ ವೃದ್ಧಿಯಾಗಿದ್ದು, ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ ಎಂದು ಹೇಳಿದರು.  

ಸಮಾವೇಶ ಮಾತನಾಡಿದ ಗೋವಾದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌, ‘ರಾಜ್ಯದಲ್ಲಿ 2027ರಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬರುವುದು ಖಚಿತ’ ಎಂದರು.

‘ರಾಜಕೀಯವು 100 ಮೀಟರ್‌ ಓಟದ ಸ್ಪರ್ಧೆಯಲ್ಲ, ಅದು ಮ್ಯಾರಥಾನ್‌ ಓಟ. ಇದರಲ್ಲಿ ವೇಗದ ಬದಲಿಗೆ ಮನೋಬಲದ ಪರೀಕ್ಷೆ ಆಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.