ADVERTISEMENT

ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆ ಕೈಗೊಳ್ಳಲಿದ್ದೇವೆ: ನಿತೀಶ್ ಕುಮಾರ್

ಪಿಟಿಐ
Published 1 ಜೂನ್ 2022, 15:48 IST
Last Updated 1 ಜೂನ್ 2022, 15:48 IST
ನಿತೀಶ್ ಕುಮಾರ್
ನಿತೀಶ್ ಕುಮಾರ್   

ಪಟ್ನಾ(ಬಿಹಾರ): ರಾಜ್ಯದಲ್ಲಿ ಎಲ್ಲ ಜಾತಿ ಹಾಗೂ ಸಮುದಾಯಗಳ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ತಮ್ಮ ಸರ್ಕಾರ ಕೈಗೊಳ್ಳಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬುಧವಾರ ಖಚಿತಪಡಿಸಿದ್ದಾರೆ.

ದೇಶದಲ್ಲಿ ಜಾತಿ ಆಧಾರಿತ ಗಣತಿ ನಡೆಸಲು ಕೇಂದ್ರ ಸರ್ಕಾರವು ಹಿಂದೇಟು ಹಾಕುತ್ತಿರುವ ನಡುವೆ ಬಿಹಾರ ಸರ್ಕಾರದಿಂದ ಈ ನಡೆ ಕಂಡುಬಂದಿದೆ.

ರಾಜ್ಯದಲ್ಲಿ ಸರ್ವಪಕ್ಷ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿತೀಶ್ ಕುಮಾರ್, ಜಾತಿ ಸಮೀಕ್ಷೆಗೆ ಎಲ್ಲ ಪಕ್ಷಗಳು ಸರ್ವಾನುಮತದಿಂದ ಬೆಂಬಲ ಸೂಚಿಸಿದ್ದು, ಶೀಘ್ರದಲ್ಲೇ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.

ಸರ್ವಪಕ್ಷ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಆರ್‌ಜೆಡಿ ಪಕ್ಷವನ್ನು ಪ್ರತಿನಿಧಿಸಿದರು. ಉಪಮುಖ್ಯಮಂತ್ರಿ, ಬಿಜೆಪಿ ಮುಖಂಡ ತಾರ್‌ಕಿಶೋರ್ ಪ್ರಸಾದ್ ಹಾಗೂ ರಾಜ್ಯ ಘಟಕದ ಅಧ್ಯಕ್ಷ ಸಂಜಯ್ ಜೈಸ್ವಾಲ್ ಉಪಸ್ಥಿತರಿದ್ದರು.

ಸಾಮಾಜಿಕ-ಆರ್ಥಿಕ ಸಮೀಕ್ಷೆಗೆ ಭಾರಿ ವೆಚ್ಚ ತಗಲುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಬಿಹಾರಕ್ಕೆ ಆರ್ಥಿಕ ನೆರವು ನೀಡುವಂತೆ ತೇಜಸ್ವಿ ಯಾದವ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.