
ಪಟ್ನಾ: ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ದಾಖಲೆಯ 10ನೇ ಅವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಇಂದು(ಗುರುವಾರ) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ದೇಶದಲ್ಲಿ ಅತಿ ಹೆಚ್ಚು ಬಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈವರೆಗೆ 19 ವರ್ಷಗಳ ಕಾಲ ಬಿಹಾರದ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿರುವ 74 ವರ್ಷದ ನಿತೀಶ್ ಕುಮಾರ್ ಅವರು, ದೇಶದ ಅಗ್ರ 10 ಮಂದಿ ದೀರ್ಘಾವಧಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪಟ್ನಾದ ಗಾಂಧಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಎನ್‌ಡಿಎ ನಾಯಕರ ಸಮ್ಮುಖದಲ್ಲಿ ಇಂದು ನಡೆದ ಭವ್ಯ ಸಮಾರಂಭದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
1951ರಲ್ಲಿ ಬಿಹಾರದ ಭಕ್ತಿಯಾರ್‌ಪುರದಲ್ಲಿ ಜನಿಸಿದ ಅವರು, ಜೆಪಿ ಚಳವಳಿಯ ಸಮಯದಲ್ಲಿ ರಾಜಕೀಯಕ್ಕೆ ಪ್ರವೇಶಿಸಿದರು. ಬಳಿಕ ಜನತಾ ಪಕ್ಷ ಸೇರಿ 1977ರಲ್ಲಿ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲುಂಡರು. ನಂತರ 1985ರಲ್ಲಿ ನಡೆದ ಚುನಾವಣೆಯಲ್ಲಿ ಸ್ಫರ್ಧಿಸಿ ಗೆಲುವು ಸಾಧಿಸಿದರು.
ಸುಮಾರು ಐದು ದಶಕಗಳ ರಾಜಕೀಯ ಜೀವನದಲ್ಲಿ ಪದೇ ಪದೇ ಪಕ್ಷಗಳನ್ನು ಬದಲಾಯಿಸಿದ್ದರಿಂದ ಅವರು 'ಪಲ್ಟು ರಾಮ್' ಎಂದು ಕರೆಸಿಕೊಂಡಿದ್ದಾರೆ. ಆದರೆ ಉತ್ತಮ ಆಡಳಿತ ನಿರ್ವಹಿಸಿದಕ್ಕೆ ಅವರು 'ಸುಶಾಸನ ಬಾಬು' ಎಂದೂ ಪ್ರಖ್ಯಾತರಾಗಿದ್ದಾರೆ.
ನಿತೀಶ್ ಕುಮಾರ್ ಅವರು ಸಿಎಂ ಆಗಿ ಹಲವು ದಾಖಲೆ ಬರೆದಿದ್ದಾರೆ. ದೇಶದ ಅಗ್ರ 10 ಮಂದಿ ದೀರ್ಘಾವಧಿಯ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಸಿಕ್ಕಿಂನ ಪವನ್ ಕುಮಾರ್ ಚಾಮ್ಲಿಂಗ್ ಮತ್ತು ಒಡಿಶಾದ ನವೀನ್ ಪಟ್ನಾಯಕ್ ಅವರಂತಹ ದಿಗ್ಗಜರು ಇದ್ದಾರೆ. ಅಷ್ಟೇ ಅಲ್ಲದೇ ಹೆಚ್ಚು ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ದೇಶದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ದೀರ್ಘಕಾಲ ಕಾರ್ಯನಿರ್ವಹಿಸಿದ ಮುಖ್ಯಮಂತ್ರಿಗಳ ಪಟ್ಟಿ
ಸಿಕ್ಕಿಂ: ಪವನ್ ಕುಮಾರ್ ಚಾಮ್ಲಿಂಗ್ (25 ವರ್ಷಗಳಿಗೂ ಅಧಿಕ) 1994ರ ಡಿಸೆಂಬರ್ 12– 2019ರ ಮೇ 26.
ಒಡಿಶಾ: ನವೀನ್ ಪಟ್ನಾಯಕ್ (24 ವರ್ಷಗಳಿಗೂ ಅಧಿಕ) 2000ರ ಮಾರ್ಚ್ 5 - 2024ರ ಜೂನ್ 11.
ಪಶ್ಚಿಮ ಬಂಗಾಳ: ಜ್ಯೋತಿ ಬಸು (23 ವರ್ಷಗಳಿಗೂ ಅಧಿಕ) 1977ರ ಜೂನ್ 21 - 2000ರ ನವೆಂಬರ್ 5.
ಅರುಣಾಚಲ ಪ್ರದೇಶ: ಗೆಗಾಂಗ್ ಅಪಾಂಗ್ (22 ವರ್ಷಗಳಿಗೂ ಅಧಿಕ) 1980ರ ಜನವರಿ 18- 1999ರ ಜನವರಿ 19. ಹಾಗೂ 2003ರ ಆಗಸ್ಟ್ 3 - 2007ರ ಏಪ್ರಿಲ್ 9.
ಮಿಜೋರಾಂ: ಲಾಲ್ ಥನ್ಹಾವ್ಲಾ (22 ವರ್ಷಗಳಿಗೂ ಅಧಿಕ) 1984ರ ಮೇ 5- 1986ರ ಆಗಸ್ಟ್ 21: 1989ರ ಜನವರಿ 24 - 1998ರ ಡಿಸೆಂಬರ್ 3 : 2008ರ ಡಿಸೆಂಬರ್ 11 - 2018ರ ಡಿಸೆಂಬರ್ 15,
ಹಿಮಾಚಲ ಪ್ರದೇಶ: ವೀರಭದ್ರ ಸಿಂಗ್ (21 ವರ್ಷಗಳಿಗೂ ಅಧಿಕ) 1983ರ ಏಪ್ರಿಲ್ 8 - 1990ರ ಮಾರ್ಚ್ 5; 1993ರ ಡಿಸೆಂಬರ್ 3 - 1998ರ ಮಾರ್ಚ್ 24; 2003ರ ಮಾರ್ಚ್ 6 - 2007ರ ಡಿಸೆಂಬರ್ 30; 2012ರ ಡಿಸೆಂಬರ್ 25 - 2017ರ ಡಿಸೆಂಬರ್ 27.
ತ್ರಿಪುರ: ಮಾಣಿಕ್ ಸರ್ಕಾರ್ (19 ವರ್ಷಗಳಿಗೂ ಅಧಿಕ) 1998ರ ಮಾರ್ಚ್ 11 - 2018ರ ಮಾರ್ಚ್ 9.
ಬಿಹಾರ: ನಿತೀಶ್ ಕುಮಾರ್ (19ವರ್ಷಗಳಿಗೂ ಅಧಿಕ) ಮಾರ್ಚ್ 3, 2000 ರಿಂದ ಮಾರ್ಚ್ 11, 2000ರವರೆಗೆ. ನವೆಂಬರ್ 24, 2005 ರಿಂದ ಮೇ 20, 2014 ರವರೆಗೆ ಮತ್ತು ಫೆಬ್ರುವರಿ 22, 2015 ರಿಂದ ನವೆಂಬರ್ 19, 2025 ರವರೆಗೆ.
ತಮಿಳುನಾಡು: ಎಂ. ಕರುಣಾನಿಧಿ (18 ವರ್ಷಗಳಿಗೂ ಅಧಿಕ) ಫೆಬ್ರುವರಿ 10, 1969 - ಜನವರಿ 31, 1976: ಜನವರಿ 27, 1989 - ಜನವರಿ 30, 1991: ಮೇ 13, 1996 - ಮೇ 14, 2001: ಮೇ 13, 2006 - ಮೇ 16, 2011.
ಪಂಜಾಬ್: ಪ್ರಕಾಶ್ ಸಿಂಗ್ ಬಾದಲ್ (18 ವರ್ಷಗಳಿಗೂ ಅಧಿಕ) ಮಾರ್ಚ್ 27, 1970 - ಜೂನ್ 14, 1971; ಜೂನ್ 20, 1977 - ಫೆಬ್ರುವರಿ 17, 1980; ಫೆಬ್ರುವರಿ 12, 1997 - ಫೆಬ್ರುವರಿ 26, 2002; ಮಾರ್ಚ್ 1, 2007 - ಮಾರ್ಚ್ 16, 2017.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.