ನಿತೀಶ್ ಕುಮಾರ್
– ಪಿಟಿಐ ಚಿತ್ರ
ಪಟ್ನಾ: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ 'ಕಾಯಂ ವಾಸಸ್ಥಳ ನೀತಿ’ಯನ್ನು ಜಾರಿಗೆ ತರುವುದಾಗಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೋಮವಾರ ಘೋಷಿಸಿದ್ದಾರೆ.
ಆದರೆ, ರಾಜ್ಯದಲ್ಲಿ ಜನಿಸಿದ ಮತ್ತು ವಲಸೆ ಬಂದವರಿಗೆ ಎಷ್ಟು ಪ್ರಮಾಣದ ನೇಮಕಾತಿ ಮೀಸಲಿರಲಿದೆ ಎನ್ನುವುದನ್ನು ಸಿಎಂ ಸ್ಪಷ್ಟಪಡಿಸಿಲ್ಲ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಬಿಹಾರದ ನಿವಾಸಿಗಳಿಗೆ ಆದ್ಯತೆ ನೀಡಿ ಶಿಕ್ಷಕರ ನೇಮಕಾತಿಗೆ ಅಗತ್ಯವಿರುವ ತಿದ್ದುಪಡಿಯನ್ನು ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ನಿರ್ದೇಶಿಸಲಾಗಿದೆ’ ಎಂದು ಬರೆದುಕೊಂಡಿದ್ದಾರೆ.
2005ರಲ್ಲಿ ಸರ್ಕಾರ ರಚಿಸಿದಾಗಿನಿಂದ ಶಿಕ್ಷಣ ವ್ಯವಸ್ಥೆಯಲ್ಲಿ ನಿರಂತರವಾಗಿ ಸುಧಾರಣೆಗಳನ್ನು ತಂದಿದ್ದೇವೆ. ಶಿಕ್ಷಣ ವ್ಯವಸ್ಥೆಯನ್ನು ಬಲಗೊಳಿಸಲು ಅಪಾರ ಪ್ರಮಾಣದ ಶಿಕ್ಷಕರನ್ನು ನೇಮಕ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಈ ನೀತಿಯು ಈ ವರ್ಷ ನಡೆಸುವ ‘ಶಿಕ್ಷಕರ ನೇಮಕಾತಿ ಪರೀಕ್ಷೆ (ಟಿಆರ್‌ಇ)–4’ರಲ್ಲಿ ಜಾರಿಗೆ ಬರಲಿದೆ, ಟಿಆರ್‌ಇ–5 ಅನ್ನು 2026ರಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಟಿಆರ್‌ಇ-5 ಆಯೋಜಿಸುವ ಮೊದಲು ಮಾಧ್ಯಮಿಕ ಶಿಕ್ಷಕರ ಅರ್ಹತಾ ಪರೀಕ್ಷೆ (STET) ನಡೆಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.