
ಪಟ್ನಾ: ಸದನದಲ್ಲಿ ಅಸಂಸದೀಯ ಪದ ಬಳಕೆ ಮಾಡಿ ಸುದ್ದಿಯಾಗಿದ್ದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಕುರಿತು, ‘ಈ ಹುಡುಗಿ... ಯಾವುದಕ್ಕಾದರೂ ಪ್ರಯೋಜನಕ್ಕೆ ಬರುತ್ತಾಳೆಯೇ?’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಸೋಮವಾರ ವಿಧಾನ ಪರಿಷತ್‌ನ ಕಲಾಪದ ವೇಳೆ, ‘ಬಿಹಾರದಲ್ಲಿ ಅತ್ಯಾಚಾರ ಪ್ರಕರಣಗಳು ವರದಿಯಾಗದ ಒಂದೇ ಒಂದು ಜಿಲ್ಲೆಯೂ ಇಲ್ಲ’ ಎಂದು ಪರಿಷತ್‌ನ ವಿರೋಧ ಪಕ್ಷದ ನಾಯಕಿ ರಾಬ್ಡಿ ದೇವಿ ಟೀಕಿಸಿದರು. ಈ ವೇಳೆ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದವರ ನಡುವೆ ಮಾತಿನ ಚಕಮಕಿ ನಡೆಯಿತು.
‘ಈ ಹುಡುಗಿ ಎಂದಾದರೂ ಕೆಲಸ ಮಾಡಿದ್ದಾಳೆಯೇ? ಅವಳ ಗಂಡ (ಲಾಲೂ ಪ್ರಸಾದ್ ಯಾದವ್) ಅಧಿಕಾರದಿಂದ ಕೆಳಗಿಳಿದ ಬಳಿಕ ಮುಖ್ಯಮಂತ್ರಿಯನ್ನಾಗಿ ಮಾಡಿದ. ನಾವು 2005ರಲ್ಲಿ ಅಧಿಕಾರಕ್ಕೆ ಬಂದ ನಂತರವೇ ಬಿಹಾರ ಅಭಿವೃದ್ಧಿಯ ಹಾದಿಗೆ ಮರಳಿತು’ ಎಂದು ನಿತೀಶ್ ಕುಮಾರ್ ಹೇಳಿದರು.
67 ವರ್ಷದ ರಾಬ್ಡಿ ದೇವಿ ಅವರು 1997ರಿಂದ 2005ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು.
ಖಂಡನೆ: ನಿತೀಶ್ ಕುಮಾರ್ ಹೇಳಿಕೆಯನ್ನು ರಾಬ್ಡಿ ದೇವಿ ಅವರ ಪುತ್ರಿ ರೋಹಿಣಿ ಆಚಾರ್ಯ ಖಂಡಿಸಿದ್ದಾರೆ.
‘ನಿಮ್ಮ ಭಾಷೆ ದಿನದಿಂದ ದಿನಕ್ಕೆ ಅಸಭ್ಯವಾಗುತ್ತಿದೆ. ಮಹಿಳೆಯರ ಬಗ್ಗೆ ಅಗೌರವ ತೋರುವುದು ನಿಮಗೆ ಅಭ್ಯಾಸವಾಗಿಬಿಟ್ಟಿದೆ. ಸದನದಲ್ಲಿ ಮತ್ತು ಸಾರ್ವಜನಿಕ ಸಭೆಗಳಲ್ಲಿ ಹತ್ತಕ್ಕೂ ಹೆಚ್ಚು ಬಾರಿ ಸಭ್ಯತೆಯ ಎಲ್ಲೆ ಮೀರಿ ಮಾತನಾಡಿದ್ದೀರಿ’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.