ADVERTISEMENT

ನಖಾಬ್‌ ವಿವಾದ ಬೇಸರ ತಂದಿದೆ: ಬಿಹಾರ ರಾಜ್ಯಪಾಲ ಆರಿಫ್‌ ಮೊಹಮ್ಮದ್ ಖಾನ್‌

ಪಿಟಿಐ
Published 20 ಡಿಸೆಂಬರ್ 2025, 14:30 IST
Last Updated 20 ಡಿಸೆಂಬರ್ 2025, 14:30 IST
ಆರಿಫ್ ಮೊಹಮ್ಮದ್ ಖಾನ್‌
ಆರಿಫ್ ಮೊಹಮ್ಮದ್ ಖಾನ್‌   

ಪಟ್ನಾ: ‘ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವೈದ್ಯೆಯೊಬ್ಬರ ನಖಾಬ್‌ (ಮುಖಗವುಸು) ತೆಗೆದಿದ್ದನ್ನು ವಿವಾದವಾಗಿ ನೋಡುತ್ತಿರುವುದು ನನಗೆ ಬೇಸರ ತಂದಿದೆ’ ಎಂದು ಬಿಹಾರ ರಾಜ್ಯಪಾಲ ಆರಿಫ್‌ ಮೊಹಮ್ಮದ್ ಖಾನ್‌ ಶನಿವಾರ ಹೇಳಿದ್ದಾರೆ.

ಸೋಮವಾರ ಮುಖ್ಯಮಂತ್ರಿಗಳ ಸಚಿವಾಲಯದಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ವಿತರಿಸುವ ಕಾರ್ಯಕ್ರಮ ನಡೆದಿತ್ತು. ನೇಮಕಾತಿ ಪತ್ರ ಸ್ವೀಕರಿಸಲು ವೇದಿಕೆಗೆ ಹಿಜಾಬ್‌ ಧರಿಸಿ ಬಂದ ನುಸ್ರತ್ ಪರ್ವೀನ್‌ ಅವರನ್ನು ನೋಡಿದ ಮುಖ್ಯಮಂತ್ರಿ, ‘ಇದು ಏನು’ ಎಂದು ಕೇಳಿ ಮುಖಗವುಸನ್ನು ತೆಗೆದಿದ್ದರು.

‘ಈ ಘಟನೆಯಲ್ಲಿ ವಿವಾದ ಎನ್ನುವ ಪದ ಕೇಳುವುದು ನನಗೆ ನೋವುಂಟು ಮಾಡಿದೆ. ತಂದೆ ಮತ್ತು ಮಗಳ ಮಧ್ಯೆ ವಿವಾದ ಇರಲು ಸಾಧ್ಯವೇ? ನೀವು ಇದನ್ನು ಆ ರೀತಿ ಬಿಂಬಿಸುತ್ತಿದ್ದೀರಿ. ಆ ಮನುಷ್ಯ (ಮುಖ್ಯಮಂತ್ರಿ) ವಿದ್ಯಾರ್ಥಿನಿಯರನ್ನು ತನ್ನ ಹೆಣ್ಣು ಮಕ್ಕಳಂತೆ ಕಾಣುತ್ತಾರೆ’ ಎಂದು ರಾಜ್ಯಪಾಲರು ಪತ್ರಕರ್ತರಿಗೆ ಪ್ರತಿಕ್ರಿಯಿಸಿದರು.

ADVERTISEMENT

ಮತ್ತೊಂದೆಡೆ ಟಿಬ್ಬಿ ಸರ್ಕಾರಿ ಕಾಲೇಜು ಮತ್ತು ಆಸ್ಪತ್ರೆ ಪ್ರಾಂಶುಪಾಲ ಮಹಫುಜರ್ ರೆಹಮಾನ್‌ ಅವರು, ‘ ಮಹಿಳಾ ವೈದ್ಯೆ ಸೇವೆಗೆ ಸೇರಬೇಕೆ? ಬೇಡವೇ? ಎಂದು ಮರು ಆಲೋಚನೆ ಮಾಡುತ್ತಿದ್ದಾರೆ. ಮಾಧ್ಯಮಗಳಿಂದ ನುಸ್ರತ್ ಪೋಷಕರು ಅಂತರ ಕಾಯ್ದುಕೊಂಡಿದ್ದಾರೆ. ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಶನಿವಾರ ಅಂತಿಮ ದಿನವಾದರೂ ಸರ್ಕಾರ ಮತ್ತು ಇಲಾಖೆ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಮಯ ವಿಸ್ತರಿಸಿದೆ. ಆಕೆ ಉನ್ನತ ಶಿಕ್ಷಣವನ್ನೂ ಪಡೆಯುವ ಅವಕಾಶ ಇದೆ’ ಎಂದು ಹೇಳಿದ್ದಾರೆ.

‘ಮಾಧ್ಯಮಗಳು ಸೃಷ್ಟಿಸಿದ ವಿವಾದದಿಂದ ಕುಟುಂಬಕ್ಕೆ ನೋವಾಗಿದೆ. ಆದರೆ ನಮ್ಮ ಕುಟುಂಬ ಕೋಲ್ಕತ್ತಕ್ಕೆ ಸ್ಥಳಾಂತರ ಆಗುತ್ತದೆ ಎನ್ನುವುದು ಸುಳ್ಳು. ನಿತೀಶ್ ಕುಮಾರ್‌ ಅಥವಾ ಸರ್ಕಾರದ ಮೇಲೆ ನಮಗೆ ಬೇಸರವೇನೂ ಇಲ್ಲ’ ಎಂದು ನುಸ್ರತ್‌ ಪರ್ವೀನ್‌ ಪತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.