ADVERTISEMENT

ನಿಜಾಮರ ಹಣ: ಪಾಕ್‌ ವಿರುದ್ಧ ಭಾರತಕ್ಕೆ ಗೆಲುವು

ಹೈದರಾಬಾದ್ ನಿಜಾಮ 1948ರಲ್ಲಿ ಪಾಕಿಸ್ತಾನಕ್ಕೆ ನೀಡಿದ್ದ ಹಣ

ಜೆ.ಬಿ.ಎಸ್‌ ಉಮಾನಾದ್‌
Published 2 ಅಕ್ಟೋಬರ್ 2019, 19:24 IST
Last Updated 2 ಅಕ್ಟೋಬರ್ 2019, 19:24 IST
   

ಹೈದರಾಬಾದ್: 7 ದಶಕದಷ್ಟು ಹಳೆಯ ಪ್ರಕರಣವೊಂದರಲ್ಲಿ ಬ್ರಿಟನ್ ಹೈಕೋರ್ಟ್ ಭಾರತದ ಪರವಾಗಿ ಬುಧವಾರ ತೀರ್ಪು ನೀಡಿದ್ದು, ಪಾಕಿಸ್ತಾನಕ್ಕೆ ಸೋಲಾಗಿದೆ.

ಅಂದಿನ ಹೈದರಾಬಾದ್ ನಿಜಾಮ ರಾಗಿದ್ದ ಮೀರ್ ಉಸ್ಮಾನ್ ಅಲಿ ಖಾನ್ ಅವರು ಪಾಕಿಸ್ತಾನಕ್ಕೆ ನೀಡಿದ್ದ3.5 ಕೋಟಿ ಪೌಂಡ್‌ ಮೌಲ್ಯ (ಈಗಿನ ಮೊತ್ತ ₹306 ಕೋಟಿ) ಭಾರತಕ್ಕೆ ಸೇರಿದ್ದು ಎಂದು ಕೋರ್ಟ್ ಪ್ರಕಟಿಸಿದೆ.

‘ನ್ಯಾಯಮೂರ್ತಿ ಮಾರ್ಕಸ್‌ ಸ್ಮಿತ್ ಅವರ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಪಾಕಿಸ್ತಾನದ ವಾದವನ್ನು ಕೋರ್ಟ್ ಮಾನ್ಯಮಾಡಿಲ್ಲ. ಈ ತೀರ್ಪಿಗಾಗಿ ನಮ್ಮ ಕುಟುಂಬ ಸುದೀರ್ಘ ಅವಧಿಯಿಂದ ಕಾಯುತ್ತಿತ್ತು’ ಎಂದು ನಿಜಾಮರ ಮೊ‌ಮ್ಮಗ ನವಾಬ್ ನಜಾಫ್ ಅಲಿ ಖಾನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ADVERTISEMENT

ಸಮರ್ಥನೀಯವಲ್ಲ ಎಂಬ ಕಾರಣಕ್ಕೆಪಾಕಿಸ್ತಾನದ ವಾದವನ್ನು ತಿರಸ್ಕರಿಸಿದ ಕೋರ್ಟ್, 70 ವರ್ಷಗಳ ಹಿಂದಿನ ಪ್ರಕರಣದಲ್ಲಿ ಭಾರತದ ವಾದವನ್ನು ಪುರಸ್ಕರಿಸಿತು.

ಬ್ರಿಟನ್‌ಗೆ ಪಾಕಿಸ್ತಾನದ ಮೊದಲ ಹೈಕಮಿಷನರ್ ಆಗಿದ್ದ ರಹಮತ್‌ ಉಲ್ಲಾ (1948) ಅವರ ಖಾತೆಯಲ್ಲಿ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಈ ಹಣವು ಇದೆ.

ತನಗೆ ಸಾರ್ವಭೌಮತೆಯ ರಕ್ಷಣೆ ಇದೆ ಎಂದು1950ರಲ್ಲಿ ಪಾಕಿಸ್ತಾನ ಪ್ರತಿಪಾದಿಸಿದ್ದ ಕಾರಣ, ಬ್ರಿಟನ್‌ನ ಮೇಲ್ಮನೆಯು ವಿಚಾರಣೆಯನ್ನು ಕೈಬಿಟ್ಟಿತ್ತು.

2013ರಲ್ಲಿ ಪಾಕಿಸ್ತಾನ ವಿಚಾರಣೆಗೆ ಹೊಸದಾಗಿ ಚಾಲನೆ ನೀಡಿತು. ಆದರೆ ಪದೇ ಪದೇ ವಿಚಾರಣೆಯನ್ನು ನಿಲ್ಲಿಸುವ ಪಾಕಿಸ್ತಾನದ ನಡೆಯು ಬ್ರಿಟನ್‌ ನ್ಯಾಯಾಲಯವನ್ನು ನಿಂದಿಸಿದಂತೆ ಎಂದು ಪರಿಗಣಿಸಿದ ಕೋರ್ಟ್, 70 ವರ್ಷಗಳ ಹಿಂದಿನ ದಾಖಲೆಗಳನ್ನು ವಿಶ್ಲೇಷಿಸಿ ಈ ತೀರ್ಪು ನೀಡಿದೆ.

ಶಸ್ತ್ರಾಸ್ತ್ರ ಸಾಗಣೆಗೆ ಪಾವತಿಸಲು ಈ ಹಣ ಬಳಸುವ ಉದ್ದೇಶವಿತ್ತು ಎಂದಿದ್ದ ಪಾಕಿಸ್ತಾನದ ಆರೋಪವನ್ನು ಕೋರ್ಟ್ ತಳ್ಳಿಹಾಕಿತು.

ಈ ಹಣ ಅಂದಿನ ನಿಜಾಮರಿಗೆ ಸೇರಿದ್ದು ಎಂದಿತು. ನಿಜಾಮರ ಪರವಾಗಿ ವಾದಿಸುತ್ತಿರುವ ಭಾರತ ಸರ್ಕಾರ ಹಾಗೂ ನಿಜಾಮರ ಇಬ್ಬರು ಮೊಮ್ಮಕ್ಕಳಿಗೆ ಸೇರಿದ ಹಣ ಇದು ಎಂದು ಬ್ರಿಟನ್ ಕೋರ್ಟ್ ತೀರ್ಪು ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.