ADVERTISEMENT

‘ವೈದ್ಯಕೀಯ ಪರಿಕರಗಳ ಮೇಲ್ವಿಚಾರಣೆಗೆ ಸಮಿತಿ’: ಎನ್‌ಎಂಸಿ ಸೂಚನೆ 

ಪಿಟಿಐ
Published 15 ಜುಲೈ 2025, 13:29 IST
Last Updated 15 ಜುಲೈ 2025, 13:29 IST
   

ನವದೆಹಲಿ: ಆಧುನಿಕ ಆರೋಗ್ಯ ವ್ಯವಸ್ಥೆಯಲ್ಲಿ ಬಳಸುತ್ತಿರುವ ವೈದ್ಯಕೀಯ ಪರಿಕರಗಳಿಂದ ಸಂಭವಿಸುವ ಪ್ರತಿಕೂಲ ಪರಿಣಾಮಗಳನ ಕುರಿತು ಮೇಲ್ವಿಚಾರಣೆ ನಡೆಸಲು ಹಾಗೂ ಪರಿಶೀಲಿಸಲು ದೇಶದಾದ್ಯಂತ ಇರುವ ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತ್ಯೇಕ ಸಮಿತಿಯನ್ನು ರಚಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಸೂಚನೆ ನೀಡಿದೆ. 

ಎಲ್ಲಾ ವೈದ್ಯಕೀಯ ಕಾಲೇಜುಗಳ ಡೀನ್‌ಗಳು ಮತ್ತು ಪ್ರಾಂಶುಪಾಲರಿಗೆ ಎನ್‌ಎಂಸಿ ಈ ನಿರ್ದೇಶನ ನೀಡಿದೆ. ಅಲ್ಲದೇ, ಕಾಲೇಜುಗಳಲ್ಲಿ ರಚಿಸುವ ಸಮಿತಿಗಳನ್ನು ಭಾರತೀಯ ಔಷಧ ಆಯೋಗದಲ್ಲಿ (ಐಪಿಸಿ) ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದೂ ತಿಳಿಸಿದೆ. 

ಆಧುನಿಕ ಆರೋಗ್ಯ ವ್ಯವಸ್ಥೆಯಲ್ಲಿ ಅತ್ಯಾಧುನಿಕ ವೈದ್ಯಕೀಯ ಪ‍ರಿಕರಗಳನ್ನು ಬಳಸುವುದು ಅನಿವಾರ್ಯವಾಗಿದ್ದು, ರೋಗ ಪತ್ತೆ, ಚಿಕಿತ್ಸೆ ಹಾಗೂ ನಿರ್ವಹಣೆಯಲ್ಲಿ ಈ ಪರಿಕರಗಳು ಮಹತ್ತರ ಪಾತ್ರ ವಹಿಸುತ್ತಿವೆ. ಕೆಲವು ಸಂದರ್ಭಗಳಲ್ಲಿ ಈ ಪರಿಕರಗಳಿಂದಲೇ ರೋಗಿಗಳಿಗೆ ತೊಂದರೆಯಾಗಿರುವ ಘಟನೆಗಳೂ ನಡೆದಿವೆ.

ADVERTISEMENT

ಹೀಗಾಗಿ ಅಂಥ ಘಟನೆಗಳನ್ನು ಮೇಲ್ವಿಚಾರಣೆ ಮಾಡುವುದರ ಜತೆಗೆ ಭವಿಷ್ಯದಲ್ಲಿ ಆ ಘಟನೆಗಳು ಮರುಕಳಿಸದಂತೆ ಕ್ರಮಗಳನ್ನು ಜಾರಿಗೊಳಿಸಲು ಬಲಿಷ್ಠವಾದ ವ್ಯವಸ್ಥೆಯ ಅಗತ್ಯವಿದೆ ಎಂದು ಆಯೋಗ ತಿಳಿಸಿದೆ. ಈ ನಿಟ್ಟಿನಲ್ಲಿ ಸಮಿತಿಯ ರಚನೆ ಪೂರಕವೆಂದೂ ಹೇಳಿದೆ.

ಜತೆಗೆ ಕಾಲೇಜುಗಳಲ್ಲಿ ರಚಿಸುವ ಸಮಿತಿಯ ಸಮನ್ವಯಕಾರರು ಹಾಗೂ ಸದಸ್ಯರ ಹೆಸರನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ವೈದ್ಯಕೀಯ ಅಧೀಕ್ಷಕರು ಸಮಿತಿಯ ಅಧ್ಯಕ್ಷರಾಗಿರಬೇಕು. ಅಲ್ಲದೇ, ಆಸ್ಪತ್ರೆಗಳಲ್ಲಿ ಔಷಧಿಗಳ ದುರ್ಬಳಕೆ ತಡೆಯಲು ಮತ್ತು ತಪ್ಪಾಗಿ ಔಷಧಿಗಳನ್ನು ಬಳಸುವುದರಿಂದ ಆಗುವ ಹಾನಿ ನಿಯಂತ್ರಿಸಲು ಕಡ್ಡಾಯವಾಗಿ ವಿಚಕ್ಷಣಾ ಸಮಿತಿಗಳನ್ನು ರಚಿಸಬೇಕು. ಜುಲೈ 31ರ ಒಳಗೆ ಈ ಸಮಿತಿಗಳ ನೋಂದಣಿ ಪೂರ್ಣಗೊಳಿಸಬೇಕು ಎಂದೂ ಆಯೋಗ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.