ನವದೆಹಲಿ: ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ವೈದ್ಯಕೀಯ ಕಾಲೇಜುಗಳಲ್ಲಿ ಪದವಿ ಶಿಕ್ಷಣ ಅಥವಾ ಸಾಗರೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯದಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗವು (ಎನ್‌ಎಂಸಿ) ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.
ಅನುಮತಿ ಪಡೆಯದ ಕಾಲೇಜುಗಳಿಂದ ಪಡೆಯುವ ಪದವಿಗೆ ಮಾನ್ಯತೆ ಇರುವುದಿಲ್ಲ. ವಿದೇಶಿ ವೈದ್ಯಕೀಯ ಕಾಲೇಜು ಪ್ರವೇಶ ಪರೀಕ್ಷೆಗೆ (ಎಫ್‌ಎಂಜಿಇ) ಹಾಜರಾಗಲು ಅರ್ಹತೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮಾನ್ಯತೆ ಇಲ್ಲದ ಕಾಲೇಜುಗಳಿಗೆ ಪ್ರವೇಶ ಪಡೆದರೆ, ಅದರಿಂದ ಆಗುವ ಸಮಸ್ಯೆಗಳಿಗೆ ವಿದ್ಯಾರ್ಥಿಗಳೇ ಹೊಣೆ ಆಗುತ್ತಾರೆ ಎಂದು ಎನ್‌ಎಂಸಿ ಎಚ್ಚರಿಸಿದೆ.
‘ದೇಶದಲ್ಲಿನ ಕೆಲ ವೈದ್ಯಕೀಯ ಕಾಲೇಜುಗಳು ಮಾನ್ಯತೆ ಪಡೆದಿಲ್ಲ. ಆದರೆ, ಮಾನ್ಯತೆ ಪಡೆಯಲಾಗಿದೆ ಎಂದು ವಿದ್ಯಾರ್ಥಿಗಳಿಗೆ ತಪ್ಪುಮಾಹಿತಿ ನೀಡುತ್ತಿವೆ’ ಎಂದು ಹೇಳಿದೆ.
ಎನ್‌ಎಂಸಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಎನ್‌ಎಂಸಿ ಮಾನ್ಯತೆ ಪಡೆದಿರುವ ವೈದ್ಯಕೀಯ ಕಾಲೇಜುಗಳ ವಿವರಗಳನ್ನು ಪರಿಶೀಲಿಸಬಹುದು ಅಥವಾ ಎನ್‌ಎಂಸಿ ಕಚೇರಿಗೆ ನೇರವಾಗಿ ಭೇಟಿ ನೀಡಬಹುದು ಎಂದು ತಿಳಿಸಿದೆ.
ಕಾಲೇಜುಗಳ ಮಾನ್ಯತೆಗೆ ಸಂಬಂಧಿಸಿದಂತೆ ಯಾವುದೇ ವಿಚಾರಣೆ ಅಥವಾ ಮಾಹಿತಿಗಾಗಿ ವಿದ್ಯಾರ್ಥಿಗಳು, ಪೋಷಕರು ಅಥವಾ ಸಂಬಂಧಿಸಿದ ಭಾಗಿದಾರರು ದೂರವಾಣಿ ಸಂಖ್ಯೆ +91–11–25367033 ಸಂಪರ್ಕಿಸಬಹುದು ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.