ADVERTISEMENT

ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾದ ದೇಶಗಳ ಆರ್ಥಿಕತೆಗೆ ಸಹಕಾರವಿಲ್ಲ: ಧನಕರ್‌

​ಪ್ರಜಾವಾಣಿ ವಾರ್ತೆ
Published 17 ಮೇ 2025, 9:51 IST
Last Updated 17 ಮೇ 2025, 9:51 IST
ಜಗದೀಪ್‌ ಧನಕರ್‌
ಜಗದೀಪ್‌ ಧನಕರ್‌   

ನವದೆಹಲಿ: ಭಾರತ ಮತ್ತು ಪಾಕ್‌ ಸಂಘರ್ಷದ ಸಮಯದಲ್ಲಿ ಭಾರತದ ಹಿತಾಸಕ್ತಿಗಳಿಗೆ ವಿರುದ್ಧವಾಗಿ ನಡೆದುಕೊಂಡ ರಾಷ್ಟ್ರಗಳಿಗೆ ಆರ್ಥಿಕ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಶನಿವಾರ ಹೇಳಿದ್ದಾರೆ.

ಭಾರತ ಮತ್ತು ಪಾಕ್‌ ನಡುವೆ ಉಂಟಾಗಿದ್ದ ಉದ್ವಿಗ್ನ ಸಮಯದಲ್ಲಿ ಪಾಕ್‌ಗೆ ಬೆಂಬಲ ನೀಡಿದ ಟರ್ಕಿ ಮತ್ತು ಅಜರ್‌ಬೈಜಾನ್ ನಡುವಿನ ವ್ಯಾಪಾರವನ್ನು ಭಾರತದ ವರ್ತಕ ವಲಯವು ಬಹಿಷ್ಕರಿಸಿದ್ದು, ಎರಡು ದೇಶಗಳ ಪ್ರವಾಸೋದ್ಯಮಕ್ಕೂ ನಿರ್ಬಂಧ ಹೇರಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.

ಇದರ ಬೆನ್ನಲ್ಲೇ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನಮ್ಮ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ದೇಶಗಳನ್ನು ನಾವು ಸಬಲೀಕರಣಗೊಳಿಸಲು ಸಾಧ್ಯವೇ? ದೇಶದ ಪ್ರತಿಯೊಬ್ಬರೂ ಆರ್ಥಿಕ ಸಬಲೀಕರಣದ ಬಗ್ಗೆಯೂ ಯೋಚಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

ADVERTISEMENT

ಪ್ರತಿಯೊಬ್ಬ ವ್ಯಕ್ತಿಯು ಭದ್ರತೆ ವಿಚಾರದಲ್ಲಿ ರಾಷ್ಟ್ರದೊಂದಿಗೆ ನಿಲ್ಲುವುದು ಅಗತ್ಯವಾಗಿದೆ. ವಿಶೇಷವಾಗಿ ವ್ಯಾಪಾರ, ವ್ಯವಹಾರ, ವಾಣಿಜ್ಯ ಮತ್ತು ಕೈಗಾರಿಕೆಗಳು ಭದ್ರತಾ ವಿಷಯಗಳಲ್ಲಿ ಪ್ರಮುಖ ಪಾತ್ರ ವಹಿಸಬಹುದು. ರಾಷ್ಟ್ರೀಯತೆ ದೃಷ್ಟಿಕೋನದಲ್ಲಿ ಬದ್ಧತೆಯ ಆಧಾರದ ಮೇಲೆ ಎಲ್ಲವನ್ನೂ ಚಿಂತಿಸುವುದು ಅದಕ್ಕೆ ಪ್ರತಿಯಾಗಿ ನಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಧನಕರ್‌ ಅಭಿಪ್ರಾಯಪಟ್ಟಿದ್ದಾರೆ.

ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನವು ಟರ್ಕಿ ಡ್ರೋನ್‌ಗಳನ್ನು ಬಳಸಿತ್ತು. ಅಜರ್‌ಬೈಜಾನ್ ಸಹ ಪಾಕಿಸ್ತಾನಕ್ಕೆ ಬೆಂಬಲ ವ್ಯಕ್ತಪಡಿಸಿತ್ತು.

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್‌ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.

ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್‌ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್‌. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.