ADVERTISEMENT

ಪುಲ್ವಾಮಾ ದಾಳಿಗೆ ಗುಪ್ತಚರ ವೈಫಲ್ಯ ಕಾರಣವಲ್ಲ: ಕೇಂದ್ರ

ಏಜೆನ್ಸೀಸ್
Published 26 ಜೂನ್ 2019, 19:45 IST
Last Updated 26 ಜೂನ್ 2019, 19:45 IST
   

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆಬ್ರುವರಿಯಲ್ಲಿ ನಡೆದ ದಾಳಿಗೆ ಗುಪ್ತಚರ ವೈಫಲ್ಯ ಕಾರಣವಲ್ಲ ಎಂದು ಸರ್ಕಾರವು ರಾಜ್ಯಸಭೆಗೆ ಬುಧವಾರ ತಿಳಿಸಿದೆ. ಪುಲ್ವಾಮಾ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಯೋಧರು ಬಲಿಯಾಗಿದ್ದರು.

ಪುಲ್ವಾಮಾ ದಾಳಿಗೆ ಗುಪ್ತಚರ ವೈಫಲ್ಯ ಕಾರಣವೇ ಎಂದು ಕರ್ನಾಟಕದ ಕಾಂಗ್ರೆಸ್‌ ಸಂಸದ ಸಯ್ಯದ್‌ ನಾಸಿರ್‌ ಹುಸೇನ್‌ ಅವರು ಕೇಳಿದ್ದ ಪ್ರಶ್ನೆಗೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ.ಕೃಷ್ಣ ರೆಡ್ಡಿ ಈ ಉತ್ತರ ನೀಡಿದ್ದಾರೆ.

ಗುಪ್ತಚರ ವೈಫಲ್ಯವಲ್ಲದಿದ್ದರೆ 300 ಕಿಲೋ ಸ್ಫೋಟಕಗಳಿದ್ದ ಆತ್ಮಹತ್ಯಾ ಬಾಂಬರ್‌ನ ಕಾರು ಹೆದ್ದಾರಿಯನ್ನು ಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆಗೆ, ‘ಜಮ್ಮು ಮತ್ತು ಕಾಶ್ಮೀರವು ಕಳೆದ 30 ವರ್ಷಗಳಿಂದ ಗಡಿಯಾಚೆಗಿನ ಭಯೋತ್ಪಾದನೆಗೆ ತುತ್ತಾಗಿದೆ ಎಂಬ ಉತ್ತರ ನೀಡಲಾಗಿದೆ.

ADVERTISEMENT

‘ಭಯೋತ್ಪಾದನೆ ದಮನದ ನೀತಿಯನ್ನು ಅನುಸರಿಸಲಾಗುತ್ತಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ದಮನ ಕಾರ್ಯಾಚರಣೆ ದಿಟ್ಟವಾಗಿ ನಡೆಯುತ್ತಿದೆ. ಹಾಗಾಗಿ, ಹಲವು ಉಗ್ರರ ಹತ್ಯೆ ಮಾಡಲಾಗಿದೆ. ಎಲ್ಲ ಸಂಸ್ಥೆಗಳೂ ಸಮನ್ವಯದಿಂದ ಕೆಲಸ ಮಾಡುತ್ತಿವೆ. ಗುಪ್ತಚರ ಮಾಹಿತಿಯನ್ನು ಸಂಸ್ಥೆಗಳು ಹಂಚಿಕೊಳ್ಳುತ್ತಿವೆ’ ಎಂದು ತಿಳಿಸಲಾಗಿದೆ.

ಗುಪ್ತಚರ ವೈಫಲ್ಯದಿಂದಾಗಿಯೇ ದಾಳಿ ನಡೆದಿದೆ ಎಂದು ವಿರೋಧ ಪಕ್ಷಗಳು ಸರ್ಕಾರದ ಮೇಲೆ ಆರೋಪ ಹೊರಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.